ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ದೀರ್ಘಕಾಲದ ಬೇಡಿಕೆಗಳಲ್ಲಿ ಒಂದಾಗಿರುವ ನ್ಯೂರಾಲಜಿಸ್ಟ್ ನೇಮಕಾತಿಗೆ ಸರ್ಕಾರ ಕೊನೆಗೂ ಹಸಿರುನಿಶಾನಿ ತೋರಿಸಿದೆ.
ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನ್ಯೂರಾಲಜಿಸ್ಟ್ ನೇಮಿಸಿರುವ ಬಗ್ಗೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾಜಾರ್ಜ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವಲಯದಲ್ಲಿ ಇದೇ ಮೊದಲಬಾರಿಗೆ ನ್ಯೂರಾಲಜಿಸ್ಟ್ ನೇಮಿಸಲಾಗುತ್ತಿದೆ. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಎದುರಿಸುತ್ತಿರುವ ನ್ಯೂರಾಲಜಿಕಲ್ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಭವಿಷ್ಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ನೀಡಬಹುದಾದ ಚಿಕಿತ್ಸೆಗಳಿಗೆ ಹೆಚ್ಚಿನ ಸವಲತ್ತು ಒದಗಿಸಲು ಇದರಿಂದ ಸಾಧ್ಯವಾಗಲಿರುವುದಾಗಿ ಸಚಿವೆ ತಿಳಿಸಿದ್ದಾರೆ.

