HEALTH TIPS

ಕೋವಿಡ್ ಸೂಪರ್ ತಳಿ?; ಒಮಿಕ್ರಾನ್-ಡೆಲ್ಟಾ ಪ್ರಭೇದಗಳ ಸಂಯೋಜಿತ ಸೋಂಕು

                ಜಿನೀವಾ: ಕರೊನಾ ವೈರಸ್​ನ ಒಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಿಗಳ ಸಂಯೋಜನೆಯಿಂದ ಒಂದು 'ಸೂಪರ್ ಪ್ರಭೇದ' ಸೃಷ್ಟಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಯ ಮೇಲೆ ಡೆಲ್ಟಾ ಮತ್ತು ಒಮಿಕ್ರಾನ್ ತಳಿ ಏಕಕಾಲಕ್ಕೆ ದಾಳಿ ಮಾಡಿದರೆ ಆ ರೋಗಿ 'ಸೂಪರ್ ಪ್ರಭೇದ'ದ ರೋಗಿಯಾಗುತ್ತಾನೆ ಎಂದು ಮಾಡರ್ನಾ ಔಷಧ ಕಂಪನಿಯ ಮುಖ್ಯ ವೈದ್ಯಾಧಿಕಾರಿ ಪೌಲ್ ಬರ್ಟನ್ ಹೇಳಿದ್ದಾರೆ.

             ಜಗತ್ತಿನಾದ್ಯಂತ ಒಮಿಕ್ರಾನ್ ಹರಡುವ ವೇಗ ಗಮನಿಸಿದರೆ ಸೂಪರ್ ಪ್ರಭೇದದ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ಬ್ರಿಟನ್ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಗೆ ಬರ್ಟನ್ ತಿಳಿಸಿದ್ದಾರೆ.

             3 ದಿನಗಳಲ್ಲಿ ದುಪ್ಪಟ್ಟಾಗುವ ಒಮಿಕ್ರಾನ್: ಹೊಸದಾಗಿ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ರೂಪಾಂತರಿ 89 ದೇಶಗಳಲ್ಲಿ ಪತ್ತೆಯಾಗಿದೆ. ಸಾಮುದಾಯಿಕ ಹರಡುವಿಕೆಯ ಪ್ರದೇಶಗಳಲ್ಲಿ ಅದು ಒಂದೂವರೆಯಿಂದ 3 ದಿನದಲ್ಲಿ ದುಪ್ಪಟ್ಟುಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಶನಿವಾರ ಹೇಳಿದೆ. ಡೆಲ್ಟಾಗಿಂತ ಒಮಿಕ್ರಾನ್ ಹರಡುವಿಕೆ ವೇಗ ಶೇ. 70ರಷ್ಟು ಹೆಚ್ಚಿದೆ. ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಒಮಿಕ್ರಾನ್ ತುಂಬಾ ವೇಗವಾಗಿ ಹರಡುತ್ತಿದೆ. ಆದರೆ, ರೋಗನಿರೋಧಕ ಶಕ್ತಿಯ (ಇಮ್ಯುನಿಟಿ) ಮೇಲೆ ದಾಳಿ ಮಾಡುವ ಮತ್ತು ಸೋಂಕು ಹರಡುವ ವೈರಸ್​ನ ಅಂತರ್ಗತ ಅಧಿಕ ಸಾಮರ್ಥ್ಯ ಇದಕ್ಕೆ ಕಾರಣವೇ ಅಥವಾ ಅವೆರಡೂ ಒಟ್ಟಿಗೇ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಬ್ಲ್ಯುಎಚ್​ಒ ಹೇಳಿದೆ.

            ದೇಶದಲ್ಲಿ ದೈನಿಕ 14 ಲಕ್ಷ ಒಮಿಕ್ರಾನ್?: ಬ್ರಿಟನ್​ನಂಥ ಪರಿಸ್ಥಿತಿ ಭಾರತದಲ್ಲಿಯೂ ಸೃಷ್ಟಿಯಾದರೆ ಒಮಿಕ್ರಾನ್ ಪ್ರಭೇದದ 14 ಲಕ್ಷ ದೈನಿಕ ಕೇಸ್​ಗಳು ದೇಶದಲ್ಲಿ ಪತ್ತೆಯಾಗಬಹುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ. ಬ್ರಿಟನ್ ಮತ್ತು ಫ್ರಾನ್ಸ್​ನಲ್ಲಿ ವಯಸ್ಕರಿಗೆ ಶೇಕಡ ನೂರರಷ್ಟು ಲಸಿಕೆ ಹಾಕಿದ್ದರೂ ಆ ಎರಡೂ ದೇಶಗಳಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್ ತಳಿಗಳು ಹಾವಳಿ ನಡೆಸುತಿದೆ. ದೇಶದಲ್ಲೂ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಬ್ರಿಟನ್​ನಲ್ಲಿ ಶುಕ್ರವಾರ 93,000ಕ್ಕೂ ಅಧಿಕ ಕೋವಿಡ್ ಕೇಸ್​ಗಳು ವರದಿಯಾಗಿದ್ದು, ಒಮಿಕ್ರಾನ್​ನ ಪ್ರಕರಣ 14,909ಕ್ಕೆ ತಲುಪಿದೆ. ಭಾರತದಲ್ಲಿ ಕೂಡ ಅದೇ ರೀತಿಯಲ್ಲಿ ಸ್ಪೋಟಿಸಿದರೆ ನಮ್ಮ ದೇಶದ ಜನಸಂಖ್ಯೆಯನ್ನು ಪರಿಗಣಿಸಿದರೆ ಪ್ರತಿ ದಿನ 14 ಲಕ್ಷ ಪ್ರಕರಣ ವರದಿಯಾಗಬಹುದು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪೌಲ್ ಹೇಳಿದ್ದಾರೆ. ಎಚ್ಚರಿಸಿದ್ದಾರೆ. ಫ್ರಾನ್ಸ್​ನಲ್ಲಿ 65,000 ಕೇಸ್ ವರದಿಯಾಗುತ್ತಿವೆ. ಅದನ್ನು ಲೆಕ್ಕ ಹಾಕಿದರೆ ಭಾರತದಲ್ಲಿ ದೈನಿಕ ಕೇಸ್ 13 ಲಕ್ಷ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

              ಲಸಿಕೆ ಸಾಗಾಟ ಸಾಧನಕ್ಕೆ 18% ಜಿಎಸ್​ಟಿ: ಕೋವಿಡ್ ಲಸಿಕೆ ಒಯ್ಯುವ ಹಲವು ಸಾಧನಗಳಿಗೆ ಶೇಕಡ 18 ಸರಕು ಮತ್ತು ಸೇವಾ ತೆರಿಗೆ ಆಕರವಾಗುವ ಸಂಭವವಿದೆ. ಕರೊನಾ ವ್ಯಾಕ್ಸಿನ್ ಸಾಗಿಸುವುದಕ್ಕಾಗಿಯೇ ಎಂದು ಉತ್ಪಾದಿಸಿದ ಸಾಧನಗಳನ್ನು ಹೊರತು ಪಡಿಸಿ ಸಾಗಾಟದ ಇತರ ಸಾಧನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರಬಹುದು ಎಂದು ಉತ್ತರ ಪ್ರದೇಶದ ಜಿಎಸ್​ಟಿ ಕುರಿತ ಅಡ್ವಾನ್ಸ್ ಮೇಲ್ಮನವಿ ಪ್ರಾಧಿಕಾರ (ಎಎಆರ್) ತೀರ್ಪು ನೀಡಿದೆ. ಇದರಿಂದಾಗಿ ಕೋವಿಡ್ ಲಸಿಕೆ ಅಭಿಯಾನದಲ್ಲಿ ಬಳಸುವ ಹಲವು ಸಾಧನಗಳ ಜಿಎಸ್​ಟಿ ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

           62 ಲಕ್ಷ ಡೋಸ್ ವ್ಯರ್ಥ: ಭಾರತದಲ್ಲಿ ಲಸಿಕೆಯ 62 ಲಕ್ಷಕ್ಕೂ ಅಧಿಕ ಡೋಸ್ ಬಳಸದೆ ಹಾಳಾಗಿದೆ. ಆ ಪೈಕಿ ಅರ್ಧದಷ್ಟು ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೇ ವ್ಯರ್ಥವಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ಸಂಸತ್ತಿಗೆ ತಿಳಿಸಿದ್ದಾರೆ. ಕಳೆದ 11 ತಿಂಗಳಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ಬಳಸದೆ ವ್ಯರ್ಥ ಮಾಡಿವೆ. ಕರ್ನಾಟಕ (1,27 ಲಕ್ಷ) ಸಹಿತ 11 ರಾಜ್ಯಗಳು ತಲಾ ಒಂದು ಲಕ್ಷ ಡೋಸ್​ಗಿಂತ ಅಧಿಕ ಲಸಿಕೆ ವೇಸ್ಟ್ ಮಾಡಿವೆ.

             ಸರ್ಟಿಫಿಕೆಟ್ ಹಾವಳಿ: ಕೇಂದ್ರ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ, ಪಿಯುಷ್ ಗೋಯಲ್ ಮೊದಲಾದ ಹೆಸರನ್ನು ಹೋಲುವ ಹೆಸರಿನಲ್ಲಿ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೆಟ್ ಕೊಡುವ ಜಾಲವೊಂದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಡ್ರೋನ್​ನಿಂದ ವ್ಯಾಕ್ಸಿನ್ ಸಾಗಾಟ: ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ತೀರಾ ಒಳನಾಡಿನ ಗ್ರಾಮವೊಂದಕ್ಕೆ ಕೋವಿಡ್ ಲಸಿಕೆಯನ್ನು ಅಧಿಕಾರಿಗಳು ಡ್ರೋನ್ ಮೂಲಕ ಸಾಗಿಸಿದ್ದಾರೆೆ. ಜವ್ಹಾರ್​ನಿಂದ ಝಾಪ್ ಗ್ರಾಮಕ್ಕೆ 300 ಲಸಿಕೆಗಳ ಬ್ಯಾಚ್​ಅನ್ನು ಡ್ರೋನ್​ನಿಂದ ಕೇವಲ ಒಂಬತ್ತು ನಿಮಿಷದಲ್ಲಿ ಸಾಗಿಸಲಾಗಿದೆ. ಮಾಮೂಲಿ ಸಾರಿಗೆಯಲ್ಲಾದರೆ 40 ನಿಮಿಷ ಬೇಕಾಗುತ್ತಿತ್ತು.

  1.                ಭಾರತಕ್ಕೆ ಹೆಚ್ಚು ಅಪಾಯವಿಲ್ಲ: ಒಮಿಕ್ರಾನ್​ನಿಂದ ಭಾರತಕ್ಕೆ ಹೆಚ್ಚು ಅಪಾಯವಿಲ್ಲ. ಬ್ರಿಟನ್ ಮಾದರಿಯನ್ನು ಇಲ್ಲಿಗೂ ಅನ್ವಯಿಸಲಾಗದು ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ಎಂ. ವಿದ್ಯಾಸಾಗರ್ ಹೇಳಿದ್ದಾರೆ. 'ಬ್ರಿಟನ್ ಮಾದರಿ ಭಾರತಕ್ಕೆ ಅಪ್ರಸ್ತುತ' ಎಂದು ಹೈದರಾಬಾದ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್ ವಿದ್ಯಾಸಾಗರ್ ಸ್ಪಷ್ಟಪಡಿಸಿದ್ದಾರೆ. ಬ್ರಿಟನ್​ನಲ್ಲಿ ಸೆರೊ-ಪಾಸಿಟಿವಿಟಿ ಕಡಿಮೆಯಿದೆ ಹಾಗೂ ವ್ಯಾಕ್ಸಿನ್ ಪರಿಣಾಮತ್ವದ ಪ್ರಮಾಣ ಕಡಿಮೆಯಿದೆ. ಆದರೆ ಭಾರತದಲ್ಲಿ ಅದಕ್ಕೆ ತದ್ವಿರುದ್ಧವಾದ ಸನ್ನಿವೇಶವಿರುವುದರಿಂದ ಸೋಂಕು ಪ್ರಮಾಣ ಕಡಿಮೆಯಿರುತ್ತದೆ. ಅಜಾಗ್ರತೆ ಹೆಚ್ಚಾದರೆ ಫೆಬ್ರವರಿಯಲ್ಲಿ 3ನೇ ಅಲೆ ಸಾಧ್ಯತೆ ಇದೆ ಎಂದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries