ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಭಿವೃದ್ಧಿಕಾರ್ಯ ಪೂರ್ತಿಗೊಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಪ್ರತಿನಿಧಿಗಳು ಮತ್ತೆ ಚಳವಳಿಗೆ ಮುಂದಾಗಿದ್ದಾರೆ. ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಎದುರ್ತೋಡಿನಿಂದ ಎಡನೀರು ಮಾಸ್ತಿಕುಂಡು ವರೆಗಿನ ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಅಗೆದುಹಾಕಿ ಪ್ರಸಕ್ತ ಸಂಚರಿಸಲಾಗದಷ್ಟು ಶಿಥಿಲಗೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ಹಾಳಾದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಚಾಲಕರು ಈ ರಸ್ತೆ ಅಭಿವೃದ್ಧಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದು, ಸರ್ಕಾರ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆ ಇಲ್ಲಿನ ನಾಗರಿಕರು ಹಾಗೂ ಪ್ರಯಾಣಿಕರ ತಾಳ್ಮೆ ಪರೀಕ್ಷಿಸುವಂತಿದೆ. ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು, ವಿಟ್ಲ, ಪುತ್ತೂರು ತೆರಳುವ ಅಂತಾರಾಜ್ಯ ಸಂಚಾರದ ಹಲವಾರು ವಾಹನಗಳೂ ಇದೇ ರಸ್ತೆಯನ್ನು ಬಳಸುತ್ತಿದೆ. ರಸ್ತೆಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳದಿರುವುದನ್ನು ಪ್ರತಿಭಟಿಸಿ ಎರಡು ತಿಂಗಳಿಗೂ ಹೆಚ್ಚುಕಾಲ ನೆಲ್ಲಿಕಟ್ಟೆ ಪ್ರದೇಶದಲ್ಲಿ ಜನಪರ ಹೋರಾಟ ಸಮಿತಿಯಿಂದ ಧರಣಿ ನಡೆಸಿದ ಪರಿಣಾಮ ತುರ್ತಾಗಿ ಗುತ್ತಿಗೆದಾರರು ಕೆಲಸ ಪುನರಾರಂಭಿಸಿದರೂ, ಅರ್ಧದಲ್ಲಿ ಕೆಲಸಬಿಟ್ಟು ತೆರಳಿರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ.
ಇಂದು ಧರಣಿ:
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರಿನಿಂದ ಎದುರ್ತೋಡು ವರೆಗಿನ ಶೋಚನೀಯಾವಸ್ಥೆ ಬಗೆಹರಿಸುವಂತೆ ಆಗ್ರಹಿಸಿ ಡಿ. 7ರಂದು ಬೆಳಗ್ಗೆ 11ಕ್ಕೆ ಎದುರ್ತೋಡಿನಿಂದ ಎಡನೀರು ವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರಸ್ತೆ ಅಭಿವೃದ್ಧಿಕಾರ್ಯ ತಕ್ಷಣ ಪೂರ್ತಿಗೊಳಿಸದಿದ್ದಲ್ಲಿ, ಅನಿರ್ಧಿಷ್ಟಾವಧಿಕಾಲ ಈ ಹಾದಿಯಾಗಿ ವಆಹನಗಳ ತಡೆ ಮುಷ್ಕರ ಕೈಗೊಳ್ಳಲಾಗುವುದು ಎಂದು ಹೋರಾಟ ಸಮಿತಿ ಪ್ರತಿನಿಧಿಗಳು ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಅಭಿಮತ:
ರಸ್ತೆ ಅಭಿವೃದ್ಧಿಕಾರ್ಯ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೀರ್ಘ ಕಾಲದಿಂದ ಪ್ರತಿಭಟನೆ ನಡೆಸಿದ ಕಾರಣ ಕೆಲಸ ಪುನರಾರಂಭಿಸಿದ್ದರೂ, ಮತ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಅಧಿಕಾರಿಗಳು, ಗುತ್ತಿಗೆದಾರರ ಮೇಲೆ, ಗುತ್ತಿಗೆದಾರರು ಸರ್ಕಾರದ ಮೇಲೆ ಆರೋಪ, ಪ್ರತ್ಯಾರೋಪ ನಡೆಸುತ್ತಾರೆ. ಇದಕ್ಕಾಗಿ ಜನಪರ ಹೋರಾಟ ಸಮಿತಿ ಹೋರಾಟಕ್ಕಿಳಿದಿದೆ.
ಅಬೂಬಕ್ಕರ್ ಗಿರಿ, ಪದಾಧಿಕಾರಿ
ಜನಪರ ಹೋರಾಟ ಸಮಿತಿ




