HEALTH TIPS

ಜಮ್ಮು-ಕಾಶ್ಮೀರ: 30 ವರ್ಷಗಳ ಬಳಿಕ ಹಾರಾಡಿದ ರಾಷ್ಟ್ರಧ್ವಜ

             ಶ್ರೀನಗರ30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಪ್ರಮುಖ ವೃತ್ತ ಲಾಲ್‌ಚೌಕದಲ್ಲಿನ ಐತಿಹಾಸಿಕ ದೊಡ್ಡಗಡಿಯಾರದ (ಘಂಟಾಘರ್) ಮೇಲೆ ಬುಧವಾರ ತ್ರಿವರ್ಣ ಧ್ವಜ ಹಾರಿಸಲಾಯಿತು.

            ಸಾಮಾಜಿಕ ಕಾರ್ಯಕರ್ತರಾದ ಸಜೀದ್‌ ಯುಸುಫ್‌ ಶಾ ಹಾಗೂ ಸಹೀಲ್‌ ಬಶೀರ್‌ ಭಟ್‌ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಬೆಂಬಲಿಗರು, ಕಾಶ್ಮೀರ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.

             ಬೃಹತ್ ಕ್ರೇನ್‌ ಬಳಸಿ ಧ್ವಜಾರೋಹಣ ನೆರವೇರಿಸಲಾಯಿತು. ಪ್ರತಾಪ್‌ ಪಾರ್ಕ್‌, ಇಕ್ಬಾಲ್‌ ಪಾರ್ಕ್‌ ಸೇರಿದಂತೆ ವಿವಿಧೆಡೆ ತ್ರಿವರ್ಣ ಧ್ವಜಗಳು ರಾರಾಜಿಸಿದವು. ತ್ರಿವರ್ಣ ಧ್ವಜ ಹೆಚ್ಚು ಮಾರಾಟವಾದವು.

            1992ರಲ್ಲಿ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್‌ ಜೋಶಿ ಅವರು ಘಂಟಾಘರ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ್ದರು.

                                         ಸಂಭ್ರಮದ ಗಣರಾಜ್ಯೋತ್ಸವ

             ಮೈ ಕೊರೆಯುವ ಚಳಿ ಹಾಗೂ ಭದ್ರತಾ ಪಡೆಗಳ ಬಿಗಿಭದ್ರತೆಯ ನಡುವೆ ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ 73ನೇ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುನ್ನಚ್ಚರಿಕೆಯ ಕ್ರಮವಾಗಿ ಮುಂಜಾನೆಯಿಂದಲೇ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಗಣರಾಜ್ಯೋತ್ಸವದ ಆಚರಣೆ ಮುಗಿಯುತ್ತಿದ್ದಂತೆ ಮತ್ತೆ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲಾಯಿತು. ಕಾಶ್ಮೀರದಾದ್ಯಂತ ಗಣರಾಜ್ಯೋತ್ಸವ ಆಚರಣೆಯು ಶಾಂತಿಯುತವಾಗಿ ನಡೆದಿದ್ದು, ಸಂಭವನೀಯ ದುಷ್ಕೃತ್ಯಗಳನ್ನು ವಿಫಲಗೊಳಿಸಲು ಎಲ್ಲೆಡೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

             ಶ್ರೀನಗರದ ಶೆರ್‌-ಇ-ಕಾಶ್ಮೀರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಸಲಹೆಗಾರ ಆರ್‌.ಆರ್‌.ಭಟ್ನಾಗರ್‌ ಧ್ವಜಾರೋಹಣ ನೆರವೇರಿಸಿದರು.

           ಜಮ್ಮುವಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ, 'ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವು ಶಾಶ್ವತ ಶಾಂತಿ ಮತ್ತು ಪ್ರಗತಿ ಹಾಗೂ ಅಭಿವೃದ್ಧಿಯ ಹಾದಿಯಲ್ಲಿದೆ. ಆದರೆ ಇಲ್ಲಿನ ಕೆಲವರಿಗೆ ಅಭಿವೃದ್ಧಿ ಇಷ್ಟವಾಗದ ಕಾರಣ ಜನರನ್ನು ಪ್ರಚೋದಿಸುವುದನ್ನು ಮುಂದುವರೆಸಿದ್ದಾರೆ' ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಆರೋಪಿಸಿದರು.

             'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಮ್ಮು ಮತ್ತು ಕಾಶ್ಮೀರವು ಶಾಂತಿ, ಪ್ರಗತಿ ಹಾಗೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಕೇಂದ್ರಾಡಳಿತ ಪ್ರದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ಯಲು ಹಾಗೂ ದೇಶದ ಇತರೆ ರಾಜ್ಯಗಳಿಗೆ ಸರಿಸಮನಾದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಇಲ್ಲಿನ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಯುವ ಸಮೂಹ ಕೈಜೋಡಿಸುವುದರ ಜತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

          'ಜಮ್ಮು ಮತ್ತು ಕಾಶ್ಮೀರವು ಮುಂದಿನ ಫೆಬ್ರುವರಿಯಲ್ಲಿ  25 ಸಾವಿರ ಕೋಟಿ ಹೂಡಿಕೆಯ ನಿರೀಕ್ಷೆಯಲ್ಲಿದೆ. ಸರ್ಕಾರವು ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಖಾತ್ರಿಪಡಿಸಿದೆ' ಎಂದು ಹೇಳಿದರು.

            1989ರಿಂದ 2018ರವರೆಗೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡುತ್ತಿದ್ದರು. ಅಲ್ಲದೇ ಈ ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಉಗ್ರರು ಎಚ್ಚರಿಕೆ ನೀಡುತ್ತಿದ್ದರು. ಹಾಗಾಗಿ ಇಂತಹ ಆಚರಣೆಗಳು ಶ್ರೀನಗರ ಹಾಗೂ ಜಮ್ಮು ಸೇರಿದಂತೆ ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries