HEALTH TIPS

73ನೇ ಗಣರಾಜ್ಯೋತ್ಸವ ವಿಶೇಷ: ಭಾರತದ ತೆಕ್ಕೆಗೆ ಜಾರಿದ ಬ್ರಿಟಿಷ್ ಬ್ರ್ಯಾಂಡ್ ಕಂಪನಿಗಳು!

         ಬೆಂಗಳೂರು: ಭಾರತದಲ್ಲಿ ಇಂದು 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ರಿಟಿಷರ ಗುಲಾಮಗಿರಿಯಿಂದ 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಭಾರತವು 1950 ಜನೆವರಿ 26ರಂದು ಗಣರಾಜ್ಯವಾಯಿತು. ಸ್ವಾತಂತ್ರ್ಯದ ಪಡೆದ ಬಳಿಕವೂ ಭಾರತದಲ್ಲಿ ದೀರ್ಘಕಾಲದವರೆಗೆ ಬ್ರಿಟಿಷ್ ಕಂಪನಿಗಳು ಪ್ರಾಬಲ್ಯ ಹೊಂದಿದ್ದವು. ಆಗ್ಲೂ ಸಹ ಟಾಟಾ, ಬಿರ್ಲಾ, ಗೋದ್ರೇಜ್‌ನಂತಹ ಸ್ವದೇಶಿ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದವು. ಕ್ರಮೇಣ ಭಾರತೀಯ ಉದ್ಯಮಿಗಳು ಮತ್ತು ಕಂಪನಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾ ಹೋದರು. ಅದರ ಪ್ರತಿಫಲವೆಂಬಂತೆ ಇಂದು ಅನೇಕ ಪ್ರಸಿದ್ಧ ಬ್ರಿಟಿಷ್ ಬ್ರ್ಯಾಂಡ್‌ಗಳು ಭಾರತೀಯ ಕಂಪನಿಗಳ ಭಾಗವಾಗಿವೆ.

                         ರಾಯಲ್ ಎನ್‌ಫೀಲ್ಡ್
         ರಾಯಲ್ ಎನ್‌ಫೀಲ್ಡ್ ಬ್ರಿಟಿಷ್ ಮೋಟಾರ್‌ ಸೈಕಲ್ ನ ಐಕಾನಿಕ್ ಬ್ರಾಂಡ್ ಆಗಿದೆ. ಯುಕೆಯ ರೆಡ್ಡಿಚ್ ಮೂಲದ ಎನ್‌ಫೀಲ್ಡ್ ಸೈಕಲ್ ಕಂಪನಿ ಲಿಮಿಟೆಡ್ 1901ರಲ್ಲಿ ರಾಯಲ್ ಎನ್‌ಫೀಲ್ಡ್ ಬ್ರಾಂಡ್ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸ್ವಾತಂತ್ರ್ಯದ ನಂತರ ಹಲವಾರು ದಶಕಗಳವರೆಗೆ ಈ ಬ್ರ್ಯಾಂಡ್ ಬ್ರಿಟಿಷರದ್ದಾಗಿಯೇ ಇತ್ತು. 1994ರಲ್ಲಿ ಇದನ್ನು ಭಾರತೀಯ ಆಟೋಮೊಬೈಲ್ ಕಂಪನಿ ಐಚರ್ ಮೋಟಾರ್ಸ್ ಖರೀದಿಸಿತು. ಇಂದು ಕ್ಲಾಸಿಕ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ ಮೆರೆಯುತ್ತಿದೆ. ಈ ಬ್ರ್ಯಾಂಡ್ ವಿಶೇಷವಾಗಿ ಭಾರತದ ಕ್ಲಾಸಿಕ್ ಬೈಕ್ ಮಾರುಕಟ್ಟೆಯಲ್ಲಿ ರಾಜನಂತಿದೆ.

        ಜಾಗ್ವಾರ್ ಲ್ಯಾಂಡ್ ರೋವರ್

ಈ ಐಷಾರಾಮಿ ಕಾರು ಕಂಪನಿಯು ಒಂದು ಕಾಲದಲ್ಲಿ ವಿಶ್ವದ ಬ್ರಿಟಿಷರಿಗೆ ಹೆಮ್ಮೆಯಂತೆ ಇತ್ತು. ನಂತರ ಇದನ್ನು ಅಮೆರಿಕನ್ ಕಂಪನಿ ಫೋರ್ಡ್ ಮೋಟಾರ್ಸ್ ಖರೀದಿಸಿತು. ಫೋರ್ಡ್ ಮೋಟಾರ್ಸ್ ಎಲ್ಲಾ ಪ್ರಯತ್ನಗಳ ನಂತರವೂ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟವನ್ನು ಸುಧಾರಿಸಲು ಸಾಧ್ಯವಾಗಲಿಲ್ಲ. ಫೋರ್ಡ್ ಅಂತಿಮವಾಗಿ 2008ರಲ್ಲಿ ಅದನ್ನು ಮಾರಾಟ ಮಾಡಲು ನಿರ್ಧರಿಸಿತು. ಈ ಸಂದರ್ಭದಲ್ಲಿ ಭಾರತೀಯ ಕಂಪನಿ ಟಾಟಾ ಮೋಟಾರ್ಸ್ ಖರೀದಿ ಮಾಡಿತು. ಟಾಟಾ ಕೈಗೆ ಬಂದ ಕೂಡಲೇ ಜಾಗ್ವಾರ್ ಲ್ಯಾಂಡ್ ರೋವರ್ ಅದೃಷ್ಟ ಮಿಂಚ ತೊಡಗಿದೆ. ಟಾಟಾ ವಿನ್ಯಾಸ ಮತ್ತು ನಾವೀನ್ಯತೆಯಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಇದರ ಪರಿಣಾಮವಾಗಿ, ಜಾಗ್ವಾರ್ ಲ್ಯಾಂಡ್ ರೋವರ್ ಯುಕೆಯಲ್ಲಿ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿಯೂ ಅಗ್ರ ಐಷಾರಾಮಿ ಕಾರು ಕಂಪನಿಗಳಲ್ಲಿ ಒಂದಾಗಿದೆ.

                         ಟೆಟ್ಲಿ ಟೀ
         ಭಾರತದಲ್ಲಿ ಚಹಾ ಇಲ್ಲದ ಮುಂಜಾನೆ ಇಲ್ಲ ಅನ್ನೋ ಪರಿಸ್ಥಿತಿ ಇದೆ. ಚಹಾವನ್ನು ಬ್ರಿಟಿಷರು ಭಾರತಕ್ಕೆ ತಂದು ದೊಡ್ಡ ಮೊತ್ತದ ಹಣ ಗಳಿಕೆ ಮಾಡಿದರು. ಟೆಟ್ಲಿ ಟೀ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬ್ರಿಟಿಷ್ ಟೀ ಬ್ರ್ಯಾಂಡ್ ಆಗಿದೆ. ಇದೀಗ ಇದು ಟಾಟಾ ಸಮೂಹದ ಭಾಗವೂ ಆಗಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಕಂಪನಿಯು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ ತೆಕ್ಕೆಗೆ ಜಾರಿದೆ. ಅಂದಿನಿಂದ ಈ ಬ್ರಿಟಿಷ್ ಬ್ರ್ಯಾಂಡ್ ಭಾರತೀಯ ಕಂಪನಿಯ ಭಾಗವಾಗಿದೆ. ಇದು ಯುಕೆ ಹಾಗೂ ಕೆನಡಾದಲ್ಲಿ ಹೆಚ್ಚು ಮಾರಾಟವಾಗುವ ಚಹಾ ಬ್ರಾಂಡ್ ಆಗಿದೆ.

                         ಈಸ್ಟ್ ಇಂಡಿಯಾ ಕಂಪನಿ
           ಈ ಕಂಪನಿಯ ಹೆಸರು ಭಾರತೀಯರಾದವ್ರಿಗೆ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತವನ್ನು ಈ ಕಂಪನಿಯು 1857 ರವರೆಗೆ ಆಕ್ರಮಿಸಿಕೊಂಡಿತ್ತು, ಒಂದು ಕಾಲದಲ್ಲಿ ಈ ಕಂಪನಿಯು ಕೃಷಿಯಿಂದ ಹಿಡಿದು ಗಣಿಗಾರಿಕೆ ಮತ್ತು ರೈಲ್ವೇವರೆಗಿನ ಎಲ್ಲಾ ಕೆಲಸಗಳನ್ನು ಮಾಡುತ್ತಿತ್ತು. ಭಾರತೀಯ ಮೂಲದ ಉದ್ಯಮಿ ಸಂಜೀವ್ ಮೆಹ್ತಾ, ಈ ಕಂಪನಿಯನ್ನು ಖರೀದಿ ಮಾಡಿ, ಇ-ಕಾಮರ್ಸ್ ವೇದಿಕೆಯನ್ನಾಗಿ ಮಾಡಿದ್ದಾರೆ. ಪ್ರಸ್ತುತ ಈ ಕಂಪನಿಯು ಆನ್‌ಲೈನ್‌ನಲ್ಲಿ ಚಹಾ, ಕಾಫಿ, ಚಾಕೊಲೇಟ್ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದೆ.

                       ಹ್ಯಾಮ್ಲೀಸ್
           ಈ ಬ್ರ್ಯಾಂಡ್ ಅನ್ನು ಪ್ರಪಂಚದಾದ್ಯಂತ ಪ್ರೀಮಿಯಂ ಆಟಿಕೆ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಂಪನಿಯು ಭಾರತ ಸೇರಿದಂತೆ ಅಮೆರಿಕ, ಯುಕೆ, ಚೀನಾದಂತಹ ದೊಡ್ಡ ಮಾರುಕಟ್ಟೆಗಳಲ್ಲಿ ಸಾಕಷ್ಟು ವ್ಯಾಪಾರವನ್ನು ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದನ್ನು 2019ರಲ್ಲಿ ಖರೀದಿಸಿತು. ಹ್ಯಾಮ್ಲೀಸ್ ಪ್ರಸ್ತುತ ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳನ್ನು ಹೊಂದಿದೆ. ಇದು ಅನೇಕ ದೇಶಗಳಲ್ಲಿ ದೊಡ್ಡ ಆಟಿಕೆ ಕಂಪನಿಯಾಗಿದೆ.

                      ಡಿಲಿಗೆಂಟಾ
           ಟಾಟಾ ಅನೇಕ ವಿದೇಶಿ ಕಂಪನಿಗಳನ್ನು ವಿಶೇಷವಾಗಿ ಬ್ರಿಟಿಷ್ ಬ್ರ್ಯಾಂಡ್‌ಗಳನ್ನು ಗುರಿಯಾಗಿಟ್ಟುಕೊಂಡು ಖರೀದಿ ಮಾಡಿದೆ. ಬ್ರಿಟಿಷ್ ಐಟಿ ಕಂಪನಿಯಾಗಿರುವ ಡಿಲಿಜೆಂಟಾ ಅನ್ನು ಟಾಟಾ ಸಮೂಹದ ಟಿಸಿಎಸ್ ಖರೀದಿಸಿದೆ. TCS ಭಾರತದ ಅತಿದೊಡ್ಡ IT ಕಂಪನಿಯಾಗಿದೆ. ಡಿಲಿಜೆಂಟಾ TCS ನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಂಪನಿಯು ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಚಿಲ್ಲರೆ ವ್ಯಾಪಾರ, ಹಣಕಾಸು, ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಿಗೆ ಐಟಿ ಸೇವೆಗಳನ್ನು ಒದಗಿಸುತ್ತಿದೆ.

                        ಕೋರಸ್ ಗ್ರೂಪ್
             ಇದುವರೆಗಿನ ಟಾಟಾದ ಶಾಪಿಂಗ್ ಪಟ್ಟಿಯಲ್ಲಿ ಇದು ಮೂರನೇ ಅತಿದೊಡ್ಡ ಬ್ರಿಟಿಷ್ ಬ್ರ್ಯಾಂಡ್ ಆಗಿದೆ. ಕೋರಸ್ ಗ್ರೂಪ್ ಪ್ರಪಂಚದಾದ್ಯಂತ ಉಕ್ಕಿನ ಮಾರುಕಟ್ಟೆಯಲ್ಲಿ ಹಿಡಿತ ಹೊಂದಿತ್ತು. ಬ್ರಿಟನ್‌ನ ಈ ಅತಿದೊಡ್ಡ ಉಕ್ಕಿನ ಕಂಪನಿಯನ್ನು ಟಾಟಾ ಗ್ರೂಪ್‌ನ ಟಾಟಾ ಸ್ಟೀಲ್ ಲಿಮಿಟೆಡ್ 2007ರಲ್ಲಿ ಖರೀದಿ ಮಾಡಿದೆ. ಈಗ ಇದನ್ನು ಟಾಟಾ ಸ್ಟೀಲ್ ಯುರೋಪ್ ಎಂದು ಕರೆಯಲಾಗುತ್ತಿದೆ. ಈ ಖರೀದಿಯೊಂದಿಗೆ ಟಾಟಾ ಯುರೋಪ್‌ನ ಉಕ್ಕಿನ ಮಾರುಕಟ್ಟೆಯನ್ನು ಪ್ರವೇಶಿಸಿತು.

                         ಒಪ್ಟೇರ್
          ಈ ಬ್ರ್ಯಾಂಡ್ ಪ್ರಸ್ತುತ ಭಾರತೀಯ ವಾಹನ ಕಂಪನಿ ಅಶೋಕ್ ಲೇಲ್ಯಾಂಡ್‌ನ ಭಾಗವಾಗಿದೆ. ಈ ಕಂಪನಿ ಸಿಂಗಲ್ ಡೆಕ್ಕರ್, ಡಬಲ್ ಡೆಕ್ಕರ್, ಟೂರಿಸ್ಟ್, ಐಷಾರಾಮಿ ಮತ್ತು ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸುತ್ತದೆ. ಇದು ಯುರೋಪ್‌ನಲ್ಲಿ ಹೆಚ್ಚು ಮಾರಾಟವಾಗುವ ಬಸ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ಕಂಪನಿಯು ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸುವಲ್ಲಿಯೂ ಮೊದಲ ಸಾಲಿನಲ್ಲಿದೆ.

                     ಬಿಎಸ್ಎ ಮೋಟಾರ್‌ಸೈಕಲ್ಸ್
       ಭಾರತದ ಮಹೀಂದ್ರಾ ಗ್ರೂಪ್‌ನ ಕ್ಲಾಸಿಕ್ ಲೆಜೆಂಡ್ 2016ರಲ್ಲಿ ಬಿಎಸ್‌ಎ ಮೋಟಾರ್‌ ಸೈಕಲ್‌ಗಳ ಖರೀದಿಯೊಂದಿಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಬ್ರ್ಯಾಂಡ್ ಒಮ್ಮೆ ಬ್ರಿಟನ್‌ನ ಉನ್ನತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾದ ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿಯ ಒಡೆತನದಲ್ಲಿತ್ತು. ದಿವಾಳಿಯಾದ ನಂತರ ಅದನ್ನು ಕ್ಲಾಸಿಕ್ ಲೆಜೆಂಡ್ ಸ್ವಾಧೀನಪಡಿಸಿಕೊಂಡಿತು. BSA ಗೋಲ್ಡ್‌ಸ್ಟಾರ್ 650 ಬಿಡುಗಡೆಯೊಂದಿಗೆ ಬ್ರ್ಯಾಂಡ್ ಇತ್ತೀಚೆಗೆ ಪುನರಾಗಮನ ಮಾಡಿದೆ.

                    ಇಂಪಿರಿಯಲ್ ಎನರ್ಜಿ
          ಇಂಪಿರಿಯಲ್ ಎನರ್ಜಿ(ಪೆಟ್ರೋಲಿಯಂ ಮತ್ತು ಗ್ಯಾಸ್ ಕಂಪನಿ)ಯನ್ನು ಭಾರತ ಸರ್ಕಾರದ ಒಡೆತನದಲ್ಲಿರುವ ಸರ್ಕಾರಿ ಕಂಪನಿ ಒಎನ್‌ಜಿಸಿ ಖರೀದಿಸಿದೆ. ಈ ಕಂಪನಿಯು ರಷ್ಯಾ, ಯುಕೆ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸೈಬೀರಿಯಾ ಪ್ರದೇಶದ ಅತಿದೊಡ್ಡ ಕಚ್ಚಾ ತೈಲ ಕಂಪನಿ ಎಂದು ಹೆಸರಾಗಿದೆ. ಕಂಪನಿಯು ಸೈಬೀರಿಯಾದಲ್ಲಿನ ತನ್ನ ಬಾವಿಗಳಿಂದ ತೈಲ ಮತ್ತು ಅನಿಲವನ್ನು ಅನೇಕ ದೇಶಗಳಿಗೆ ರಫ್ತು ಮಾಡುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries