ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ವೀರ ಯುಗ ಪುರುಷ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಯಿತು.
ಏಳನೇ ತರಗತಿ ವಿದ್ಯಾರ್ಥಿನಿ ಪೂರ್ವೀ ಎಸ್. ಧರಣೀಕರ್, ಅಮೇರಿಕಾದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರಿಸಿ ಮಾತನಾಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ.ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳದಲ್ಲಿ ಹಿಂದೆ ಜಾತಿ ತಾರತಮ್ಯ ತಾಂಡವವಾಡುತ್ತಿತ್ತು. ಕೆಳ ಜಾತಿಯವರ ನೆರಳು ಕೂಡಾ ಮೇಲ್ಜಾತಿಯರ ಮೇಲೆ ಬೀಳಬಾರದು ಎನ್ನುವ ಕಾರಣಕ್ಕೆ ಸೊಂಟಕ್ಕೆ ಗಂಟೆ ಕಟ್ಟಿಕೊಂಡು ಓಡಾಡಬೇಕಾದ ಪರಿಸ್ಥಿತಿಯನ್ನು ಕಂಡ ಸ್ವಾಮಿ ವಿವೇಕಾನಂದರು ಕೇರಳವನ್ನು ಹುಚ್ಚರ ಸಂತೆ ಎಂದಿದ್ದರು.ಜಾತೀಯ ತಾರತಮ್ಯ ಹೋಗಲಾಡಿಸಲು ಅವರು ಜಾಗೃತಿ ಮೂಡಿಸಿದ್ದರು ಎಂದರು.
ಜನಸೇವೆಯೇ ಜನಾರ್ದನ ಸೇವೆ ಎಂಬ ವಿವೇಕಾನಂದರ ಉಕ್ತಿಯನ್ನು ತನ್ನ ಜೀವನದಲ್ಲಿ ಅಳವಡಿಸಿ ಸಮಾಜ ಸೇವೆಯಲ್ಲಿ ತೊಡಗಿರುವ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ಎಣ್ಮಕಜೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಆಯಿಷ ಎ.ಎ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿವೇಕಾನಂದರ ಜೀವನಾದರ್ಶಗಳ ಮಹತ್ವವನ್ನು ವಿವರುಸಿದರು.ವಾರ್ಡ್ ಸದಸ್ಯ ರಾಮಚಂದ್ರ ಮೊಳಕ್ಕಾಲು ಶುಭ ಹಾರೈಸಿದರು.
ಮಾತೃ ಸಂಘದ ಅಧ್ಯಕ್ಷೆ ದಿವ್ಯಾಸಾಗರ್ ಶಿರಂತಡ್ಕ ಮಾತನಾಡಿ, ವಿವೇಕಾನಂದರ ಜೀವನ ಚರಿತ್ರೆಯ ಕೆಲವೊಂದು ಪ್ರಮುಖ ಘಟನೆಗಳನ್ನು ಕಥೆಯನ್ನಾಗಿಸಿ ಮಕ್ಕಳಿಗೆ ಮನದಟ್ಟಾಗುವಂತೆ ತಿಳಿಸಿದರು.ವಿವೇಕಾನಂದ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಧಾ ವಿಜೇತರಿಗೆ ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್. ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಿದ್ಯಾರ್ಥಿನಿ ದೇವಿಪ್ರಣಮ್ಯ, ಹರ್ಷಿತ ಮತ್ತು ಅಂಜಲಿ ಪ್ರಾರ್ಥನೆ ಹಾಡಿದರು.ಹಿರಿಯ ಶಿಕ್ಷಕ ಸಚ್ಚಿದಾನಂದ ವಂದಿಸಿದರು.ವಿದ್ಯಾರ್ಥಿಗಳಾದ ಗ್ರೀಷ್ಮ ಹಾಗೂ ಲಿಖಿತ್ ನಿರ್ವಹಿಸಿದರು.




