ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಬಹುದಾದ ಚುನಾವಣಾ ವೆಚ್ಚವನ್ನು 70 ಲಕ್ಷದಿಂದ 95 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ. ಅಂತೆಯೇ ವಿಧಾನಸಭಾ ಕ್ಷೇತ್ರದಲ್ಲಿ ಮಾಡಬಹುದಾದ ಖರ್ಚನ್ನು 28 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಲಾಗಿದೆ.
0
samarasasudhi
ಜನವರಿ 07, 2022
ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಬಹುದಾದ ಚುನಾವಣಾ ವೆಚ್ಚವನ್ನು 70 ಲಕ್ಷದಿಂದ 95 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ. ಅಂತೆಯೇ ವಿಧಾನಸಭಾ ಕ್ಷೇತ್ರದಲ್ಲಿ ಮಾಡಬಹುದಾದ ಖರ್ಚನ್ನು 28 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಲೋಕಸಭಾ ಚುನಾವಣೆಗೆ ಸಣ್ಣ ರಾಜ್ಯಗಳಲ್ಲಿ 75 ಲಕ್ಷ ಹಾಗೂ ದೊಡ್ಡ ರಾಜ್ಯಗಳಲ್ಲಿ 95 ಲಕ್ಷ ರೂಪಾಯಿವರೆಗೆ ಅಭ್ಯರ್ಥಿಗಳು ವೆಚ್ಚ ಮಾಡಬಹುದಾಗಿದೆ. ಈ ಮುನ್ನ ಇದು ಕ್ರಮವಾಗಿ 54 ಲಕ್ಷ ಮತ್ತು 70 ಲಕ್ಷ ಇತ್ತು.
ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿಯನ್ನೂ ದೊಡ್ಡ ರಾಜ್ಯಗಳಲ್ಲಿ 40 ಲಕ್ಷ ಮತ್ತು ಚಿಕ್ಕ ರಾಜ್ಯಗಳಲ್ಲಿ 28 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಭ್ಯರ್ಥಿಗಳು ಮಾಡಬಹುದಾದ ವೆಚ್ಚದ ಮಿತಿ ಈ ಹಿಂದೆ ಕ್ರಮವಾಗಿ 28 ಲಕ್ಷ ಮತ್ತು 20 ಲಕ್ಷ ಆಗಿತ್ತು. ಮುಂಬರುವ ಚುನಾವಣೆಯಿಂದಲೇ ಹೊಸ ಪರಿಷ್ಕೃತ ಪಟ್ಟಿ ಜಾರಿಗೆ ಬರಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮುಂದಿನ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ವೆಚ್ಚದ ಮಿತಿ 40 ಲಕ್ಷ ಇರಲಿದ್ದು, ಗೋವಾ ಹಾಗೂ ಮಣಿಪುರದಲ್ಲಿ ಪ್ರತಿ ಅಭ್ಯರ್ಥಿಗಳು 28 ಲಕ್ಷ ರೂಪಾಯಿವರೆಗೆ ವೆಚ್ಚ ಮಾಡಬಹುದಾಗಿದೆ.
ರ‍್ಯಾಲಿಗಳು ಮತ್ತು ಸ್ಟಾರ್ ಪ್ರಚಾರಕರ ಸಭೆ ಸಮಾರಂಭಗಳ ವೆಚ್ಚವನ್ನು ಪಕ್ಷಗಳು ಭರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳು ಮಾಡಬಹುದಾದ ವೆಚ್ಚಕ್ಕೆ ಯಾವುದೇ ಮಿತಿ ಇರುವುದಿಲ್ಲ.