ಕಾಸರಗೋಡು: ಅತ್ಯಂತ ಸದೃಢ ಹಾಗೂ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ರಬ್ಬರ್ ಡ್ಯಾಂ ಕಾಸರಗೋಡು ಜಿಲ್ಲೆಯಲ್ಲಿ ಪ್ರಚಲಿತದಲ್ಲಿದ್ದು, ಇದು ಕಾಂಕ್ರೀಟ್ ಡ್ಯಾಮ್‍ಗಳಿಗಿಂತ ಹೆಚ್ಚು ಬಾಳ್ವಿಕೆ ಹಾಗೂ ನೆರೆ ತಡೆಗಟ್ಟುವಲ್ಲೂ ಸಹಾಯವಾಗುತ್ತಿದೆ. ಜಿಲ್ಲೆಯ ಪನತ್ತಡಿ ಪಂಚಾಯಿತಿಯಲ್ಲಿ ಯೋಜನೆ ಜಾರಿಗೊಳ್ಳುವುದರೊಂದಿಗೆ ರಬ್ಬರ್ ಡ್ಯಾಂ ನಿರ್ಮಾಣದಲ್ಲಿ ಕೇರಳದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಐದು ರಬ್ಬರ್ ಡ್ಯಾಂಗಳ ನಿರ್ಮಾಣಕ್ಕೆ ಯೋಜನೆಯಿರಿಸಲಾಗಿದ್ದು, ಮೊದಲ ಹಂತದಲ್ಲಿ ಪನತ್ತಡಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಏಜನ್ಸಿ ಐಸಿಎಆರ್ ಭುವನೇಶ್ವರದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಾಟರ್ ಮ್ಯಾನೇಜ್‍ಮೆಂಟ್‍ನ ತಾಂತ್ರಿಕ ಸಹಕಾರದೊಂದಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಾಮಗಾರಿ ನಡೆಸಲಾಗಿದೆ. ಇಲ್ಲಿನ ಮಾನಡ್ಕ ಸನಿಹ ಇರಿಞËಲಂಕೋಡ್ ತೋಡಿಗೆ ತಿಮ್ಮಂಚಾಲ್ ಎಂಬಲ್ಲಿ ಈ ರಬ್ಬರ್ ಡ್ಯಾಂ ನಿರ್ಮಿಸಲಾಗಿದೆ.
ಊಟಿ ಹಾಗೂ ಒಡಿಶಾದಲ್ಲಿ ಈಗಾಗಲೇ ಇಂತಹ ರಬ್ಬರ್ ಡ್ಯಾಂ ನಿರ್ಮಿಸಿ ಯಶಸ್ಸು ಪಡೆಯಲಾಗಿದೆ. 1.5ಮೀ.ನಿಂದ ತೊಡಗಿ, 2.5ಮೀ ಎತ್ತರದ ವರೆಗೆ ರಬ್ಬರ್ ಡ್ಯಾಂ ನಿರ್ಮಿಸಲಾಗುತ್ತದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒಳಪಡಿಸಿ, 48ಲಕ್ಷ ರೂ. ವೆಚ್ಚದಲ್ಲಿ ಪನತ್ತಡಿ ಕೋಳಿಚ್ಚಾಲ್ ರಸ್ತೆಯ ಇರಿಞËಲಂಕೋಡ್ ತೋಡಿಗೆ ಎರಡುವರೆ ಮೀ. ಎತ್ತರ, ಹತ್ತು ಮೀ. ಅಗಲದಲ್ಲಿ ರಬ್ಬರ್ ಡ್ಯಾಂ ನಿರ್ಮಿಸಲಾಗಿದೆ. ಇಲ್ಲಿ ಕಾಂಕ್ರೀಟ್ ಸ್ತಂಭ, ಮಧ್ಯೆ ಹಲಿಗೆ ಅಳವಡಿಕೆ, ಇದರ ಸಂದಿಗೆ ಮಣ್ಣು ತುಂಬುವುದು ಇತ್ಯಾದಿ ಯಾವುದೇ ಜಂಜಾಟವಿಲ್ಲದೆ, ಹೊಸ ತಂತ್ರಜ್ಞಾನದ ಮೂಲಕ ರಬ್ಬರ್ ಡ್ಯಾಂ ನಿರ್ಮಿಸಲಾಗಿದೆ. ತಳಭಾಗಕ್ಕೆ ಕಾಂಕ್ರೀಟ್ ಅಳವಡಿಸಿ ಸಮತಟ್ಟುಗೊಳಿಸಿ, ತೋಡಿನ ಎರಡೂ ಬದಿ ಕಾಂಕ್ರೀಟ್ ತಡೆಗೋಡ ನಿರ್ಮಿಸಲಾಗಿದೆ. ತಳಭಾಗದಲ್ಲಿ ರಬ್ಬರ್ ಟ್ಯೂಬ್‍ಗಳನ್ನಿರಿಸಿ ಇದರ ಮೇಲಕ್ಕೆ ದಪ್ಪದ ರಬ್ಬರ್ ಹಾಳೆಯನ್ನು ವ್ಯವಸ್ಥಿತವಾಗಿ ಅಳವಡಿಸಲಾಗುತ್ತದೆ. ರಬ್ಬರ್ ಡ್ಯಾಂ ನೆರೆಯಿಂದ ಹಾನಿಗೊಳಗಾಗಗದಂತೆ ಪ್ರತ್ಯೇಕ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದೆ. ಸುಮಾರು 400ಮೀ. ವರೆಗೂ ತೋಡಿನಲ್ಲಿ ನೀರು ದಾಸ್ತಾನುಗೊಳ್ಳುತ್ತಿದ್ದು, ಮಳೆಗಾಲದಲ್ಲಿ ಡ್ಯಾಮ್‍ಗೆ ಹಾನಿಯಾಗದಂತೆ ನೀರು ಹೊರ ಹರಿಯಲು ನಾಬ್ ಅಳವಡಿಸಲಾಗಿದೆ. ಕಿಂಚಿತ್ತೂ ಸೋರಿಕೆಯಿಲ್ಲದೆ, ನೀರು ದಾಸ್ತಾನುಗೊಳ್ಳುತ್ತಿದ್ದು, ಕೃಷಿಕಾರ್ಯಗಳಿಗೆ ವರದಾನವಾಗಿರುವುದಗಿ ಇಲ್ಲಿನ ಕೃಷಿಕರು ಅಭಿಪ್ರಾಯಪಡುತ್ತಾರೆ.
ಅಭಿಮತ:
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒಳಪಡಿಸಿ, ಕಿರು ನೀರಾವರಿ ಇಲಾಖೆ ರಬ್ಬರ್ ಡ್ಯಾಂ ನಿರ್ಮಿಸಿದೆ. ಇದರಿಂದ ಪಂಚಾಯಿತಿಯ ಒಂದು ಹಾಗೂ 2ನೇ ವಾರ್ಡು ವ್ಯಾಪ್ತಿಯ ಕೆಲವು ಕೃಷಿಕರಿಗೆ ಪ್ರಯೋಜನ ಲಭಿಸಲಿದೆ. ಕೇರಳದಲ್ಲಿ ಮೊದಲ ರಬ್ಬರ್ ಡ್ಯಾಂ ಎಂಬ ಹೆಗ್ಗಳಿಕೆ ಪಂಚಾಯಿತಿಗೆ ಅಭಿಮಾನವಾಗಿದೆ. 2020ರಲ್ಲಿ ಕಾಮಗಾರಿ ಆರಂಭಿಸಲಾಗಿದ್ದರೂ, ಕೋವಿಡ್ ಹಿನ್ನೆಲೆಯಲ್ಲಿ ಒಂದು ವರ್ಷ ವಿಳಂಬವಾಗಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ.
ಪ್ರಸನ್ನ ಪ್ರಸಾದ್, ಅಧ್ಯಕ್ಷೆ
ಪನತ್ತಡಿ ಗ್ರಾಮ ಪಂಚಾಯಿತಿ




