ಮುಂಬೈ: ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ವೇಳಾಪಟ್ಟಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟ ಮಾಡಿದೆ. ಅದರಂತೆ ಉಭಯ ದೇಶಗಳ ನಡುವಿನ ಸರಣಿ ಆರು ಸ್ಥಳಗಳ ಬದಲಾಗಿ ಕೇವಲ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳ ಸಂಪೂರ್ಣ ಸರಣಿ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದರೆ, ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಮೊದಲಿನ ವೇಳಾಪಟ್ಟಿಯ ಪ್ರಕಾರ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯು ದೇಶದ ಆರು ನಗರಗಳಲ್ಲಿ ನಡೆಯಬೇಕಿದ್ದವು. ಫೆಬ್ರವರಿ 6, 9 ಹಾಗೂ 12 ರಂದು ಕ್ರಮವಾಗಿ ಅಹಮದಾಬಾದ್, ಜೈಪುರ ಹಾಗೂ ಕೋಲ್ಕತದಲ್ಲಿ ಏಕದಿನ ಪಂದ್ಯಗಳು ನಿಗದಿಯಾಗಿದ್ದರೆ, ಫೆಬ್ರವರಿ 15, 18 ಹಾಗೂ 20 ರಂದು ಮೂರು ಪಂದ್ಯಗಳ ಟಿ20 ಸರಣಿ ಕಟಕ್, ವಿಶಾಖಪಟ್ಟಣ ಹಾಗೂ ತಿರುವನಂತಪುರದಲ್ಲಿ ನಿಗದಿಯಾಗಿದ್ದವು.
ಆದರೆ, ಪ್ರಸ್ತುತ ದೇಶವು ಕೋವಿಡ್-19 ನ ಮೂರನೇ ಅಲೆಯಲ್ಲಿದ್ದು, ಭಾರತದ ಸಾಂಕ್ರಾಮಿಕ ಪರಿಸ್ಥಿತಿಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, "ಬಯೋ ಸೆಕ್ಯೂರಿಟಿ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರಣಿಯಲ್ಲಿ ಆರು ಸ್ಥಳಗಳ ಬದಲಾಗಿ, ಕೇವಲ ಎರಡೇ ಸ್ಥಳಗಳಿಗೆ ಸೀಮಿತಗೊಳಿಸಲು" ಮಂಡಳಿ ನಿರ್ಧಾರ ಮಾಡಿದೆ. ಇದರಿಂದಾಗಿ ತಂಡಗಳು, ಪಂದ್ಯದ ಅಧಿಕಾರಿಗಳು, ಪ್ರಸಾರಕರು ಮತ್ತುಇತರ ಅಧಿಕಾರಿಗಳ ಪ್ರಯಾಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಬಿಸಿಸಿಐ ಹೇಳಿದೆ.




