ಬದಿಯಡ್ಕ: ಜಗತ್ತಿನ ಪ್ರತಿ ಆಗು-ಹೋಗಿನ ಹಿಂದೆಯೂ ದೈವ ಸಂಕಲ್ಪವೊಂದು ಕಾರ್ಯನಿರ್ವಹಿಸುತ್ತದೆ. ಹಿಂದೂ ದೇವಾಲಯಗಳ ಪುನರುತ್ಥಾನದಿಂದ ದೇಶ ಸುಭಿಕ್ಷವಾಗಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಶನಿವಾರದಿಂದ ಆರಂಭಗೊಂಡ ಪುನರ್ ಪ್ರತಿಷ್ಠ|ಆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಗಳು ಮಾತನಾಡಿದರು.
ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಎಲ್ಲಾ ವಲಯಗಳಲ್ಲೂ ಬೀರಿರುವ ಪರಿಣಾಮಗಳು ಗಂಭೀರವಾಗಿದ್ದರೂ ಭಾರತದ ಮೇಲೆ ಅಷ್ಟೊಂದು ದುಷ್ಪರಿಣಾಮ ಬೀರದಿರುವುದರ ಹಿಂದೆ ಇಲ್ಲಿಯ ಧಾರ್ಮಿಕತೆ, ನಂಬಿಕೆ, ಸನಾತನ ದೈವ ಶಕ್ತಿಗಳೇ ಕಾರಣವಾಗಿದ್ದು, ಅಂತಹ ಪ್ರಾಚೀನ ಪರಂಪರೆಯನ್ನು ಮುನ್ನಡೆಸುವ ಕಾರ್ಯಚಟುವಟಿಕೆಗಳು ನಡೆಯಬೇಕು ಎಂದರು. ಯುವ ತಲೆಮಾರಿಗೆ ಜೀವನ ಮೌಲ್ಯ, ಧರ್ಮ ಹಾಗೂ ಕ್ರಿಯಾತ್ಮಕ ಮನೋಸ್ಥಿತಿ ನಿರ್ಮಾಣದಂತಹ ಅರಿವಿನ ಸಾಗರದತ್ತ ಕರೆತರಬೇಕು ಎಂದು ಶ್ರೀಗಳು ಕರೆನೀಡಿದರು.
ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಗೌರೀಶಂಕರ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಗ್ರಾಮವಾಗಿದ್ದ ಈ ಪರಿಸರ ಇನ್ನಷ್ಟು ಅಭಿವೃದ್ದಿಗೊಳ್ಳಬೇಕಿದ್ದು, ಶ್ರೀಕ್ಷೇತ್ರದ ಪುನರುತ್ಥಾನದ ಮೂಲಕ ಬದಲಾವಣೆಗೆ ತೆರೆದುಕೊಳ್ಳಲಿ. ಕ್ಷೇತ್ರ ಪರಿಸರದ ಸಹೃದಯಿ ಭಕ್ತರ ಭಕ್ತಿ, ಸಂಕಲ್ಪ, ಶ್ರಮಗಳ ಫಲವಾಗಿ ಶ್ರೀಸನ್ನಿಧಿ ನವೀಕರಣಗೊಂಡಿದೆ ಎಂದರು.
ಹಿರಿಯ ಜ್ಯೋತಿಷ್ಯ ವಿದ್ವಾಂಸ ಕುಂಜಾರು ವೆಂಕಟೇಶ್ವರ ಭಟ್ ಪಾಲಕ್ಕಾಡ್ ಧಾರ್ಮಿಕ ಉಪನ್ಯಾಸ ನೀಡಿ ಶ್ರದ್ದಾ ಕೇಂದ್ರಗಳು ಆಯಾ ಪರಿಸರದ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿದ್ದು ಸಮಾಜವನ್ನು ಸತ್ಪಥದತ್ತ ಮುನ್ನಡೆಸುವ ಧೀಶ|ಕ್ತಿಯ ಕೇಂದ್ರವಾಗಿದೆ ಎಂದರು. ಮಧೂರು ಶ್ರೀ ಸಿದ್ದಿವಿನಾಯಕ ಮಹಾಗಣಪತಿ ಕ್ಷೇತ್ರದ ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಉಪಸ್ಥಿತರಿದ್ದು ಶುಭಹಾರೈಸಿದರು. ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ ಭಟ್ ಏವುಂಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷ್ಣಮೂರ್ತಿ ಪುದುಕೋಳಿ ವಂದಿಸಿದರು. ಪ್ರೊ.ಎ.ಶ್ರೀನಾಥ್ ನಿರೂಪಿಸಿದರು.
ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ಇಂದಿನ ಕಾರ್ಯಕ್ರಮ:
ಜ.23 ರಂದು ಬೆಳಿಗ್ಗೆ 6 ರಿಂದ ಗಣಪತಿಹೋಮ, ಪ್ರಾಯಶ್ಚಿತ ಹೋಮ, ಚತುಘಶುದ್ದಿ, ಧಾರಾ ಆವಗಾಹ ಪಂಚಕ, ಅಂಕುರಪೂಜೆ ನಡೆಯಲಿದೆ. 10.30 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 6ಕ್ಕೆ ಭಜನೆ, 6ರಿಂದ ಹೋಮ, ಕಲಶಾಭಿಷೇಕ, ಅಂಕುರಪೂಜೆ, ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.




