ನವದೆಹಲಿ: 'ಗಡೀಪಾರು ವಿಶೇಷವಾದ ಕ್ರಮ. ಅಪರೂಪಕ್ಕೆ ಬಳಸಬೇಕು. ಸಕ್ಷಮ ಪ್ರಾಧಿಕಾರದ ವಾದ ತೃಪ್ತಿಕರವಾಗಿದ್ದಲ್ಲಿ ಗರಿಷ್ಠ ಎರಡು ವರ್ಷ ಜಾರಿಗೊಳಿಸಬಹುದು. ಇಲ್ಲದಿದ್ದರೆ ಮುಕ್ತವಾಗಿ ಸಂಚರಿಸುವ ವ್ಯಕ್ತಿಯ ಮೂಲಭೂತ ಹಕ್ಕಿಗೆ ನಿರ್ಬಂಧ ಹೇರಿದಂತಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
0
samarasasudhi
ಜನವರಿ 31, 2022
ನವದೆಹಲಿ: 'ಗಡೀಪಾರು ವಿಶೇಷವಾದ ಕ್ರಮ. ಅಪರೂಪಕ್ಕೆ ಬಳಸಬೇಕು. ಸಕ್ಷಮ ಪ್ರಾಧಿಕಾರದ ವಾದ ತೃಪ್ತಿಕರವಾಗಿದ್ದಲ್ಲಿ ಗರಿಷ್ಠ ಎರಡು ವರ್ಷ ಜಾರಿಗೊಳಿಸಬಹುದು. ಇಲ್ಲದಿದ್ದರೆ ಮುಕ್ತವಾಗಿ ಸಂಚರಿಸುವ ವ್ಯಕ್ತಿಯ ಮೂಲಭೂತ ಹಕ್ಕಿಗೆ ನಿರ್ಬಂಧ ಹೇರಿದಂತಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಭಯ್ ಎಸ್.ಓಕಾ ಅವರಿದ್ದ ಪೀಠವು, ಗಡೀಪಾರು ವಿಶೇಷ ಕ್ರಮ. ಅಪರೂಪಕ್ಕೆ ಬಳಸಬೇಕು ಎಂಬುದರಲ್ಲಿ ಯಾವುದೇ ಅನುಮಾನ ಬೇಡ ಎಂದಿತು. ಗಡೀಪಾರು ಕ್ರಮ ವ್ಯಕ್ತಿಯು ದೇಶದಾದ್ಯಂತ ಸಂಚರಿಸುವ ಮೂಲಭೂತ ಹಕ್ಕಿಗೆ ಚ್ಯುತಿ ತರಲಿದೆ. ಇಂಥ ಆದೇಶವು ಜಾರಿಯಲ್ಲಿರುವ ಅವಧಿಯಲ್ಲಿ ವ್ಯಕ್ತಿ ತನ್ನದೇ ಮನೆಯಲ್ಲಿ ಪತ್ನಿ, ಮಕ್ಕಳ ಜೊತೆಗೆ ವಾಸವಿರುವುದನ್ನು ತಡೆಯಲಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.
ಜಲ್ನಾ ಜಿಲ್ಲೆಯ ದೀಪಕ್ ಎಂಬುವರ ವಿರುದ್ಧ ಬಾಂಬೆ ಹೈಕೋರ್ಟ್ ಡಿಸೆಂಬರ್ 15, 2020ರಲ್ಲಿ ವಿಧಿಸಿದ್ದ ಗಡೀಪಾರು ಆದೇಶವನ್ನು ಪೀಠವು ವಜಾಮಾಡಿತು. ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಸಂಬಂಧದಲ್ಲಿ ಮಾವನಾದ, ಸ್ಥಳೀಯ ಶಾಸಕನ ಚಿತಾವಣೆಯಿಂದ ಈ ಕ್ರಮಜರುಗಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎರಡು ವರ್ಷಕ್ಕೆ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದರು.