ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವ ಮಧ್ಯೆ ಜನರಲ್ಲಿ ಜ್ವರ, ಶೀತ ಮತ್ತು ಕೆಮ್ಮು ಹೆಚ್ಚಾಗತೊಡಗಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶೀತ ಹವೆ ಹೆಚ್ಚಾಗಿದ್ದು, ಇದರಿಂದಾಗಿ ಜನರಲ್ಲಿ ಶೀತ, ಕೆಮ್ಮು ಜತೆಗೆ ಜ್ವರ ಬಾಧೆಯೂ ಅತಿಯಾಗಿ ಕಾಡುತ್ತಿದೆ. ಬಹುತೇಕ ಮಂದಿ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಪ್ಯಾರಸಿಟಮೋಲ್ ಮಾತ್ರೆ ಸೇವಿಸಿ ಸುಮ್ಮನಾಗುತ್ತಿದ್ದಾರೆ. ಕೋವಿಡ್‍ಗೆ ಅಂಜಿ ವೈದ್ಯರಲ್ಲಿ ಸೂಕ್ತ ತಪಾಸಣೆ ನಡೆಸಿ ಔಷಧ ಪಡೆಯಲೂ ಜನತೆ ಹಿಂದೇಟುಹಾಕುತ್ತಿದ್ದಾರೆ. ಜ್ವರ ಕಾಣಿಸಿಕೊಂಡರೂ, ವಿಶ್ರಾಂತಿ ತೆಗೆದುಕೊಳ್ಳದೆ ಜನರಮಧ್ಯೆ ಓಡಾಡುತ್ತಿರುವುದೂ ಜ್ವರ ವ್ಯಾಪಿಸಲು ಕಾರಣವಾಗುತ್ತಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು, ಎದೆ ಬಡಿತ ಹೆಚ್ಚಾಗುವುದು ಮುಂತಾದ ಸಮಸ್ಯೆಗಳನ್ನು ಗಮನಿಸುತ್ತಿರುವಂತೆಯೂ ಆರೋಗ್ಯ ಇಲಾಖೆ ನಿರ್ದೇಶಿಸಿದೆ. ಶೀತ, ಜ್ವರ ಕಾಣಿಸಿಕೊಂಡ ತಕ್ಷಣ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಭಿಮತ:
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬದಲಾಗುತ್ತಿರುವ ಹವಾಮಾನವೂ ಕಾರಣವಾಗುತ್ತಿದೆ. ಜ್ವರ, ಶೀತವನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ತಪಾಸಣೆ ನಡೆಸಿ ಔಷಧ ಪಡೆದುಕೊಳ್ಳಬೇಕು. ಜ್ವರ, ಶೀತವೂ ಕೆಲವೊಮ್ಮೆ ಕೋವಿಡ್ ಲಕ್ಷಣಗಳಾಗಿರಬಹುದು.
ಡಾ. ರಾಜಾರಾಮ್, ಅಧೀಕ್ಷಕ
ಜನರಲ್ ಆಸ್ಪತ್ರೆ, ಕಾಸರಗೋಡು

