ಕಾಸರಗೋಡು: ಕೋವಿಡ್ ಹಾಗೂ ಒಮಿಕ್ರಾನ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ನಿಯಂತ್ರಣ ಏರ್ಪಡಿಸಲು ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆ ತೀರ್ಮಾನಿಸಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದ ಮಾನದಂಡ ಪ್ರಕಾರ ಗರಿಷ್ಠ 150ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮುಚ್ಚಿದ ಸಭಾಂಗಣದಲ್ಲಿ ಗರಿಷ್ಠ 75ಮಂದಿ ಮಾತ್ರ ಭಾಗವಹಿಸಬಹುದಾಗಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಆತಂಕಪಡಬೇಕಾದ ಅಗತ್ಯವಿಲ್ಲ. ಜಿಲ್ಲೆಯಲ್ಲಿ ದಿನ ನಿತ್ಯ ರೋಗಿಗಳ ಸಂಖ್ಯೆ 50ಕ್ಕೂ ಕಡಿಮೆಯಿದ್ದು, ಕೋವಿಡ್ ರೋಗಿಗಳಿಗಾಗಿ ಸಜ್ಜುಗೊಳಿಸಲಾಗಿರುವ 220ಹಾಸಿಗೆಗಳಲ್ಲಿ ಶೇ. 11ರಷ್ಟು ಮಾತ್ರ ರೋಗಿಗಳಿದ್ದಾರೆ ಎಂದು ಕೋವಿಡ್ ಬಗ್ಗೆ ಜಾಗ್ರತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ.ಆರ್. ರಾಜನ್ ತಿಳಿಸಿದ್ದಾರೆ. ಕೋವಿಡ್ ಮಾನದಂಡ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ಜಿಲ್ಲಾ ಎಸ್‍ಪಿ ತಿಳಿಸಿದ್ದಾರೆ.
ಜಿಲ್ಲೆಯ 141 ಮಂದಿ ಸೇರಿ ರಾಜ್ಯದಲ್ಲಿ ಗುರುವಾರ 4649 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ರಾಜ್ಯದಲ್ಲಿ 17 ಮಂದಿ ಕೋವಿಡ್‍ನಿಂದ ಸಾವಿಗೀಡಾಗಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 49116ಕ್ಕೇರಿದೆ.
ರಾಜ್ಯದಲ್ಲಿ ಗುರುವಾರ 52 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕೋವಿಡ್ ಬಾಧಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿರುವವರಲ್ಲಿ ಕಾಸರಗೋಡು ಜಿಲ್ಲೆಯ 31 ಮಂದಿ ಸೇರಿದಂತೆ ರಾಜ್ಯದಲ್ಲಿ ಗುರುವಾರ 2180 ಮಂದಿ ಗುಣಮುಖರಾಗಿದ್ದಾರೆ.

