ನವದೆಹಲಿ :ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ)ಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ)ಯು ಮುಂದಿನ ತಿಂಗಳು ಗುವಾಹಟಿಯಲ್ಲಿ ನಡೆಯಲಿರುವ ತನ್ನ ಸಭೆಯಲ್ಲಿ 2021-22ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್) ಠೇವಣಿಗಳ ಮೇಲೆ ನೀಡಬೇಕಿರುವ ಬಡ್ಡಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
2020-21ನೇ ಸಾಲಿಗೆ ನಿರ್ಧರಿಸಿದ್ದಂತೆ 2021-22ನೇ ಸಾಲಿಗೂ ಇಪಿಎಫ್‌ಒ ಶೇ.8.5 ಬಡ್ಡಿದರವನ್ನು ಕಾಯ್ದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಸಿಬಿಟಿಯ ಅಧ್ಯಕ್ಷರೂ ಆಗಿರುವ ಯಾದವ,ಹಣಕಾಸು ವರ್ಷದ ಆದಾಯದ ಪ್ರಕ್ಷೇಪಣೆಯನ್ನು ಆಧರಿಸಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
2021,ಮಾರ್ಚ್‌ನಲ್ಲಿ ಸಿಬಿಟಿಯು 2020-21ನೇ ಸಾಲಿಗೆ ಇಪಿಎಫ್ ಠೇವಣಿಗಳ ಮೇಲೆ ಶೇ.8.5 ಬಡ್ಡಿದರವನ್ನು ನಿಗದಿಗೊಳಿಸಿತ್ತು. ಸಿಬಿಟಿ ಆರ್ಥಿಕ ವರ್ಷಕ್ಕಾಗಿ ಇಪಿಎಫ್ ಠೇವಣಿಗಳಿಗೆ ಬಡ್ಡಿದರವನ್ನು ನಿರ್ಧರಿಸಿದ ಬಳಿಕ ಪ್ರಸ್ತಾವವನ್ನು ವಿತ್ತ ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ವಿತ್ತ ಸಚಿವಾಲಯದ ಮೂಲಕ ಸರಕಾರದ ಅನುಮೋದನೆಯ ಬಳಿಕವೇ ಇಪಿಎಫ್‌ಒ ನಿಗದಿತ ಬಡ್ಡಿದರವನ್ನು ನೀಡುತ್ತದೆ.
2020 ಮಾರ್ಚ್ ನಲ್ಲಿ ಇಪಿಎಫ್‌ಒ 2019-20ನೇ ಸಾಲಿಗೆ ಬಡ್ಡಿದರವನ್ನು 2018-19ರ ಶೇ.8.65ರಿಂದ ಶೇ.8.5ಕ್ಕೆ ತಗ್ಗಿಸಿತ್ತು. ಇದು 2012-13ರ ಬಳಿಕ ಕನಿಷ್ಠ ಬಡ್ಡಿದರವಾಗಿತ್ತು.
ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ.8.65 ಮತ್ತು 2017-18ರಲ್ಲಿ ಶೇ.8.55 ಬಡ್ಡಿದರವನ್ನು ನಿಗದಿಗೊಳಿಸಿತ್ತು. 2015-16ರಲ್ಲಿ ಶೇ.8.8 ಬಡ್ಡಿಯನ್ನು ನೀಡಲಾಗಿತ್ತು.
2011-12ರಲ್ಲಿ ಶೇ.8.25,2012-13ರಲ್ಲಿ ಶೇ.8.5,2013-14 ಮತ್ತು 2014-15ರಲ್ಲಿ ಶೇ.8.75 ಬಡ್ಡಿಯನ್ನು ನೀಡಲಾಗಿತ್ತು.