ನವದೆಹಲಿ:ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯ ಫಲಾನುಭವಿಗಳ ಪಡಿತರ ಚೀಟಿ ಮತ್ತು ಆಧಾರ್ ವಿವರಗಳನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ)ದೊಂದಿಗೆ ಹಂಚಿಕೊಳ್ಳಲು ರಾಜ್ಯಗಳು ಖಾಸಗಿತನ ಕಳವಳಗಳು ಮತ್ತು ಹಿಂಜರಿಕೆಯನ್ನು ಹೊಂದಿದ್ದರೂ ಈ ವಿವರಗಳನ್ನು ಎನ್‌ಎಚ್‌ಎ ಜೊತೆ ಹಂಚಿಕೊಳ್ಳುವಂತೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆಯು ಅವುಗಳನ್ನು ಒತ್ತಾಯಿಸಿದೆ.
ಇಂತಹ ಮಾಹಿತಿಗಳ ವರ್ಗಾವಣೆಯ ಸುರಕ್ಷತಾ ಅಂಶಗಳ ಬಗ್ಗೆ ರಾಜ್ಯಗಳು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿವೆ ಎನ್ನಲಾಗಿದೆ. ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (ಎಸ್‌ಇಸಿಸಿ)ಯ ದತ್ತಾಂಶಗಳನ್ನು ಆಧಾರ್ ಮತ್ತು ಸಾರ್ವಜನಿಕ ಪೂರೈಕೆ ವ್ಯವಸ್ಥೆ ದತ್ತಾಂಶ ಕೋಶದೊಂದಿಗೆ ಜೋಡಣೆಯ ಎನ್‌ಎಚ್‌ಎ ಉಪಕ್ರಮವು ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿಪಿಎಂ-ಜೆಎವೈ)ಯ ಫಲಾನುಭವಿಗಳನ್ನು ಗುರುತಿಸಲು ಉದ್ದೇಶಿಸಿದೆ.
ಎಸ್‌ಇಸಿಸಿ ದತ್ತಾಂಶ ಕೋಶದಲ್ಲಿಯ ನ್ಯೂನತೆಗಳಿಂದಾಗಿ ಎಬಿಪಿಎಂ-ಜೆಎವೈ ಅಡಿ ಫಲಾನುಭವಿಗಳನ್ನು ಗುರುತಿಸುವುದು ಅತ್ಯಂತ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಎಸ್‌ಇಸಿಸಿ ದತ್ತಾಂಶ ಕೋಶವನ್ನು ಸಮೃದ್ಧಗೊಳಿಸಲು ವಿವಿಧ ವಿಧಾನಗಳನ್ನು ಎನ್‌ಎಚ್‌ಎ ಪ್ರಯತ್ನಿಸುತ್ತಿದೆ. ಎಸ್‌ಇಸಿಸಿ ಫಲಾನುಭವಿಗಳನ್ನು ಆಧಾರ್ ಮತ್ತು ಎನ್‌ಎಫ್‌ಎಸ್‌ಎ ಜೊತೆ ಜೋಡಣೆಗೊಳಿಸುವುದರಿಂದ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಬಹುದು ಎಂದು ಎನ್‌ಎಚ್‌ಎ ಸಿಇಒ ಆರ್.ಎಸ್.ಶರ್ಮಾ ಅವರು ಜ.5ರಂದು ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು.
ಆಧಾರ್ ಅನ್ನು ಎಸ್‌ಇಸಿಸಿ ದತ್ತಾಂಶ ಕೋಶದೊಂದಿಗೆ ಜೋಡಣೆಗೊಳಿಸದೆ ಆಯುಷ್ಮಾನ್ ಕಾರ್ಡ್ ಪರಿಪೂರ್ಣತೆಯನ್ನು ಸಾಧಿಸುವುದು ಅಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದರು. ಎಬಿಪಿಎಂ-ಜೆಎವೈ ಫಲಾನುಭವಿಗಳನ್ನು ಗುರುತಿಸಲು ಎನ್‌ಎಚ್‌ಎ ಉದ್ದೇಶಿಸಿದೆಯಾದರೂ ಸುರಕ್ಷತಾ ಅಂಶಗಳ ಬಗ್ಗೆ ರಾಜ್ಯಗಳು ಕಳವಳಗಳನ್ನು ಹೊಂದಿವೆ ಮತ್ತು ಈ ದತ್ತಾಂಶಗಳನ್ನು ರಾಜಕೀಯ ಲಾಭ ಗಳಿಕೆಗಾಗಿ ಬಳಸಬಹುದು ಎಂದು ಶಂಕಿಸಿವೆ ಎಂದು ಎನ್‌ಎಚ್‌ಎ ಅಧಿಕಾರಿಯೋರ್ವರು ತಿಳಿಸಿದರು.
ಆಧಾರ್ ಮಾಹಿತಿಯನ್ನು ಸಚಿವಾಲಯಗಳ ನಡುವೆ ಮುಕ್ತವಾಗಿ ಹಂಚಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ ಎನ್‌ಎಫ್‌ಎಸ್‌ಎ ಫಲಾನುಭವಿ ಮಾಹಿತಿಯನ್ನು ಹೊಂದಿರುವ ರಾಜ್ಯಗಳು ಆಧಾರ್ ವಿವರಗಳನ್ನು ಎನ್‌ಎಚ್‌ಎ ಜೊತೆ ಹಂಚಿಕೊಳ್ಳಲು ಹಿಂದೇಟು ಹೊಡೆಯುತ್ತಿವೆ. ಜ.4ರಂದು ಆಹಾರ ಇಲಾಖೆ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮತ್ತು ಐಟಿ ಸಚಿವಾಲಯದೊಂದಿಗೆ ನಡೆದಿದ್ದ ಸಭೆಯಲ್ಲಿ ಎನ್‌ಎಚ್‌ಎ ಈ ವಿಷಯವನ್ನು ಪ್ರಸ್ತಾವಿಸಿತ್ತು ಎಂದು ಇನ್ನೋರ್ವ ಸರಕಾರಿ ಅಧಿಕಾರಿ ತಿಳಿಸಿದರು.
ಹಾಲಿ ಯುಐಡಿಎಐ ಸುತ್ತೋಲೆಗಳು ಸಚಿವಾಲಯಗಳು ಮತ್ತು ಇಲಾಖೆಗಳು ಆಧಾರ್ ಮತ್ತು ಸಂಬಂಧಿತ ಮಾಹಿತಿಗಳನ್ನು ಯೋಜನೆಗಳ ಪರಿಣಾಮಕಾರಿ ಸೂತ್ರೀಕರಣ ಮತ್ತು ಫಲಾನುಭವಿಗಳ ಆಯ್ಕೆಗಾಗಿ ತಮ್ಮ ನಡುವೆ ಹಂಚಿಕೊಳ್ಳಲು ಅವಕಾಶ ನೀಡಿವೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿತ್ತು.
ಎಬಿಪಿಎಂ-ಜೆಎವೈ ಅನುಷ್ಠಾನವನ್ನು ಎನ್‌ಎಚ್‌ಎ ನಿರ್ವಹಿಸುತ್ತಿದೆ. ದತ್ತಾಂಶ ರಕ್ಷಣೆ, ಸಂಗ್ರಹ, ಖಾಸಗಿತನ ಮತ್ತು ಆಧಾರ್ ಕಾರ್ಡ್ಧಾರಕರಿಂದ ಒಪ್ಪಿಗೆಗೆ ಸಂಬಂಧಿಸಿದ ವಿವಿಧ ನಿಬಂಧನೆಗಳ ಪಾಲನೆಯ ಹೊಣೆ ಬಳಕೆದಾರ ಇಲಾಖೆಯದ್ದಾಗಿರುತ್ತದೆ,ಈ ಪ್ರಕರಣದಲ್ಲಿ ಈ ಹೊಣೆ ಎನ್‌ಎಚ್‌ಎಯದಾಗಿದೆ ಎಂದು ಅಧಿಕಾರಿ ತಿಳಿಸಿದರು. ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಲ್ಲಿ,ಉದಾಹರಣೆಗೆ ಎಸ್‌ಎಂಎಸ್‌ಗಳು ಅಥವಾ ಪಡಿತರ ಅಂಗಡಿಯಲ್ಲಿ ಭೌತಿಕವಾಗಿ ಫಲಾನುಭವಿಗಳ ಒಪ್ಪಿಗೆಯನ್ನು ಪಡೆಯಲು ಎನ್‌ಎಚ್‌ಎ ಯೋಜಿಸಿದೆ ಎಂದರು.




