ಕಾಸರಗೋಡು: ದೀನ ದಲಿತರ, ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಒಂದು ಮಹತ್ಕಾರ್ಯ. ಈ ಮೂಲಕ ಸಮಾಜ ಸೇವೆಯಲ್ಲಿ ನಿರತರಾದವರಿಗೆ ಭಗವಂತನ ಕೃಪಾಕಟಾಕ್ಷ ಎಂದಿಗೂ ಇದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.
ಅವರು ದೀನ ಬಂಧು ಚಾರಿಟೇಬಲ್ ಟ್ರಸ್ಟ್ ಕಾಸರಗೋಡು ಸಿಪಿಸಿಆರ್‍ಐ ಸಮೀಪ ನೂತನವಾಗಿ ನಿರ್ಮಿಸುತ್ತಿರುವ ಸೇವಾ ಕುಟೀರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನದಾನ, ಆ್ಯಂಬುಲೆನ್ಸ್ ಸೇವೆ, ರಕ್ತದಾನ, ವೈದ್ಯಕೀಯ ಶಿಬಿರ ಮುಂತಾದ ಸಮಾಜಮುಖೀ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್‍ನ ಸೇವಾ ಕಾರ್ಯವನ್ನು ಶ್ರೀಗಳು ಶ್ಲಾಘಿಸಿದರು.
ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಸಂಶೋಧÀನಾ ಕೇಂದ್ರದ ಬಳಿಯಲ್ಲಿ ಕಾವು ಮಠದ ತಂತ್ರಿವರ್ಯರು ಉಚಿತವಾಗಿ ನೀಡಿರುವ ಸ್ಥಳದಲ್ಲಿ ಬಿಸಿಯೂಟದ ತಯಾರಿ ಸಹಿತ ಇತರ ಸೇವಾ ಕೈಂಕರ್ಯಗಳಿಗಾಗಿ ನೂತನವಾಗಿ ನಿರ್ಮಿಸುತ್ತಿರುವ ಸೇವಾ ಕುಟೀರದ ಶಿಲಾನ್ಯಾಸ ಕಾವು ಮಠದ ಲಕ್ಷ್ಮೀನಾರಾಯಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಧಾರ್ಮಿಕ ಮುಂದಾಳು, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಗೋ ಸೇವಾ ಪ್ರಮುಖರಾದ ಅಶೋಕ ಬಾಡಿ, ಸಮಾಜ ಸೇವಕಿ ಪ್ರೇಮಲತಾ ಎಲ್ಲೋಜಿ ರಾವ್ ಅತಿಥಿಗಳಾಗಿ ಭಾಗವಹಿಸಿದರು. ಟ್ರಸ್ಟ್‍ನ ಪ್ರಮುಖರಾದ ನ್ಯಾಯವಾದಿ ಸುರೇಶ್ ಅಧ್ಯಕ್ಷತೆ ವಹಿಸಿದರು. ಟ್ರಸ್ಟ್‍ನ ಉಪಾಧ್ಯಕ್ಷ ನಾರಾಯಣ ಬೀರಂತಬೈಲು, ಪ್ರಧಾನ ಕಾರ್ಯದರ್ಶಿ ಉಮೇಶ್ ಸೇವಾ ಭಾರತಿ, ಮನೀಷ್, ಜಯಂತ, ರಾಜಾನಂದ, ಮಲ್ಲೇಶ್, ಉದಯ ಕೆ.ಕೆ.ಪುರಂ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್‍ನ ಅಧ್ಯಕ್ಷ ಪುಂಡರೀಕಾಕ್ಷ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಮಾಸ್ತರ್ ಮುಳ್ಳೇರಿಯ ಕಾರ್ಯಕ್ರಮ ನಿರೂಪಿಸಿದರು.




