ತಿರುವನಂತಪುರ: ಇಲ್ಲಿಯ ಆಟ್ಟುಕ್ಕಾಲ್ ಭಗವತೀ ಕ್ಷೇತ್ರದಲ್ಲಿ ಆಟ್ಟುಕ್ಕಾಲ್ ಪೊಂಗಾಲ ಮಹೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು.
ಕೋವಿಡ್ ಮಾನದಂಡ ಪಾಲಿಸಿಕೊಂಡು ಸಾವಿರಾರು ಮಂದಿ ಭಕ್ತಾದಿಗಳು ನೈವೇದ್ಯ ತಯಾರಿಸಿ ಶ್ರೀದೇವಿಗೆ ಸಮರ್ಪಿಸಿದರು. ಕಳೆದ ವರ್ಷದಂತೆ ಈ ಬಾರಿಯೂ ದೇವಾಲಯದ ಭಂಡಾರದ ಒಲೆಯಲ್ಲಿ ಮಾತ್ರ ಪೊಂಗಾಲ ನೈವೇದ್ಯ ತಯಾರಿಸಲಾಗಿದ್ದು, ಉಳಿದಂತೆ ಭಕ್ತಾದಿಗಳು ತಮ್ಮ ಮನೆ ವಠಾರದಲ್ಲಿ ಪೊಂಗಾಲ ನೈವೇದ್ಯ ತಯಾರಿಸಿ ದೇವಿಗೆ ಸಮರ್ಪಿಸಿದರು. ಬಹುತೇಕ ಮಂದಿ ಸಂಬಂಧಿಕರ ಮನೆಗಳಿಗೆ ತೆರಳಿ ಪೊಂಗಾಲ ನೈವೇದ್ಯ ಸಮರ್ಪಿಸಿದರು. ಬೆಳಗ್ಗೆ 10.50ಕ್ಕೆ ಕ್ಷೇತ್ರದ ಒಲೆಯಿಂದ ಬೆಂಕಿಯನ್ನು ಪೊಂಗಾಲ ನೈವೇದ್ಯ ತಯಾರಿಕೆಗಾಗಿ ಹಸ್ತಾಂತರಿಸಲಾಗಿದ್ದು, ಉಳಿದ ಭಕ್ತಾದಿಗಳು ನೈವೇದ್ಯ ತಯಾರಿ ಆರಂಭಿಸಿದ್ದರು. ಮಧ್ಯಾಹ್ನ ದೇವಸ್ಥಾನದ ಮುಖ್ಯ ಅರ್ಚಕ ಈಶ್ವರನ್ ನಂಬೂದಿರಿ ಅವರು ಕ್ಷೇತ್ರದ ಭಂಡಾರದ ಒಲೆಯಲ್ಲಿ ತಯಾರಿಸಿದ ನೈವೇದ್ಯವನ್ನು ಶ್ರೀದೇವಿಗೆ ಸಮರ್ಪಿಸಿದರು. ನಂತರ ಪ್ರತಿ ಮನೆಯಲ್ಲಿ ಶ್ರೀದೇವಿಗೆ ನೈವೇದ್ಯ ಸಮರ್ಪಿಸುವ ಕಾರ್ಯ ನಡೆಯಿತು. ಈ ಮೂಲಕ ಎಲ್ಲ ಭಕ್ತಾದಿಗಳ ನೈವೇದ್ಯವನ್ನು ಆಟ್ಟುಕ್ಕಾಲ್ ಭಗವತೀ ಸ್ವೀಕರಿಸಿರುವುದಾಗಿ ನಂಬಿಕೆಯಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೇವಸ್ಥಾನ ವಠಾರದಲ್ಲಿ ಪೊಂಗಾಲ ನೈವೇದ್ಯ ತಯಾರಿ ಕೈಬಿಡಲಾಗಿತ್ತು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಂಗಾಲ ನೈವೇದ್ಯ ಸಮರ್ಪಿಸುತ್ತಿರುವುದರಿಂದ ಆಟ್ಟುಕ್ಕಾಲ್ ಭಗವತೀ ಕ್ಷೇತ್ರ ಮಹಿಳೆಯರ ಶಬರಿಮಲೆ ಎಂದೇ ಖ್ಯಾತಿಗಳಿಸಿದೆ. ಪೊಂಗಾಲ ಉತ್ಸವ ಹಿನ್ನೆಲೆಯಲ್ಲಿ ತಿರುವನಂತಪುರ ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಗೆ ಪ್ರಾದೇಶಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

