ತಿರುವನಂತಪುರ: ಶನಿವಾರದಂದೂ ಕರ್ತವ್ಯದ ದಿನವನ್ನಾಗಿ ಮಾಡುವ ನಿರ್ಧಾರದ ವಿರುದ್ಧ ಶಿಕ್ಷಕರ ಸಂಘಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ನಿರ್ಣಯ ಕೈಗೊಂಡ ಬಳಿಕ ಸಭೆ ಕರೆಯುವುದು ಸರಿಯಲ್ಲ ಎಂದು ಶಿಕ್ಷಕರ ಸಂಘಗಳ ಆರೋಪ. ಸಂಜೆಯವರೆಗೂ ತರಗತಿಗಳನ್ನು ವಿಸ್ತರಿಸಿರುವುದರಿಂದ ಶನಿವಾರವನ್ನು ಕೆಲಸದ ದಿನವನ್ನಾಗಿ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಶಿಕ್ಷಕರ ಸಂಘಗಳು ಒತ್ತಾಯಿಸುತ್ತಿವೆ.
ಕಾಂಗ್ರೆಸ್ ನ ಶಿಕ್ಷಕರ ಸಂಘ ಕೆಪಿಎಸ್ ಟಿಎ ಈ ಬೇಡಿಕೆಗೆ ಮುಂದಾಗಿದೆ. ನೀತಿ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಸಿಪಿಐ ಶಿಕ್ಷಕರ ಸಂಘ ಎಕೆಎಸ್‍ಟಿಯು ಕೂಡಾ ಆರೋಪಿಸಿದೆ.
ಒಂದರಿಂದ ಒಂಬತ್ತನೇ ತರಗತಿಗಳು ಮತ್ತು ನರ್ಸರಿಗಳು ಇಂದಿನಿಂದ ಪುನರಾರಂಭಗೊಳ್ಳುತ್ತಿವೆ. ತರಗತಿಗಳು ಫೆ.19ರ ವರೆಗೆ ಮಧ್ಯಾಹ್ನದವರೆಗೆ ನಡೆಯಲಿವೆ. ಮುಂದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಶನಿವಾರಗಳಂದು ತರಗತಿಗಳಿರಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 21 ರಿಂದ ಸಂಜೆಯವರೆಗೆ ತರಗತಿಗಳು ನಡೆಯಲಿವೆ.
ಹತ್ತನೇ ತರಗತಿ, ಪ್ಲಸ್ ಒನ್ ಮತ್ತು ಪ್ಲಸ್ ಟು ತರಗತಿಗಳು ಫೆಬ್ರವರಿ 19 ರವರೆಗೆ ಮೊದಲಿನಂತೆಯೇ ಮುಂದುವರಿಯುತ್ತವೆ. ಫೆಬ್ರವರಿ 21 ರಿಂದ ಒಂದರಿಂದ ಪ್ಲಸ್ ಟು ವರೆಗೂ ತರಗತಿಗಳು ಸಂಜೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಶನಿವಾರಗಳು ಕೆಲಸದ ದಿನಗಳಾಗಿವೆ.
ಎಲ್ಲಾ ತರಗತಿಗಳಿಗೂ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಮಾರ್ಚ್ 16ರಿಂದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಮಾದರಿ ಪರೀಕ್ಷೆಗಳು ಆರಂಭವಾಗಲಿವೆ. ಶಾಲೆಗೆ ತೆರಳಲು ಕಷ್ಟಪಡುವವರನ್ನು ಹೊರತುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ತರಗತಿಗೆ ಕರೆತರುವಂತೆ ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ. ತರಗತಿಗೆ ಹಾಜರಾಗದವರನ್ನು ಹಾಜರಾತಿ, ಕಾರಣ ಪರಿಶೀಲಿಸಿದ ನಂತರ ಶಾಲೆಗೆ ಕರೆತರಬೇಕು. ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳು ಸರ್ಕಾರದ ನಿರ್ಧಾರವನ್ನು ಅಂಗೀಕರಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.




