ಮುಳ್ಳೇರಿಯ: ಧಾರ್ಮಿಕ ಶ್ರದ್ದಾಕೇಂದ್ರಗಳ ಪುನರುತ್ಥಾನವು ಸಮಾಜದ ಏಳಿಗೆಯ ಸಂಕೇತವಾಗಿದೆ. ಸಮಾಜವನ್ನು ಧನಾತ್ಮಕ ಸನ್ನಡತೆಯೆಡೆಗೆ ದಾಟಿಸುವ ಇಂದಿನ ತುರ್ತಿನ ಮಧ್ಯೆ ಪ್ರತಿಯೊಬ್ಬ ಸಹೃದಯನ ಕೊಡುಗೆಗಳು ಮಹತ್ವದ್ದಾಗಿದ್ದು, ಕೊಡುಗೆಯಿಂದ ಕೊನೆವರೆಗೂ ನೆಮ್ಮದಿ ಪ್ರಾಪ್ತವಾಗುತ್ತದೆ. ಈ ನಿಟ್ಟಿನಲ್ಲಿ ದೇವಾಲಯ ಮುಖೇನ ಹೊಸ ಚಿಂತನೆಗೆ ದಾರಿಮಾಡಿಕೊಡುವ ವ್ಯವಸ್ಥೆಗಳ ಸ್ಥಾಪನೆಗೆ ಪ್ರತಿಯೊಬ್ಬರೂ ನೆರವಾಗುವುದು ಸಾರ್ಥಕತೆಗೆ ಕಾರಣವಾಗುತ್ತದೆ ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಅವರು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ವಿಷ್ಣುಮಂಟಪ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಗ್ರಾಮದ ದೇವಸ್ಥಾನದಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡ ಸಭಾಭವನ ನಿರ್ಮಾಣಕ್ಕೆ ಅಡ್ವಳಬೀಡು ವಸಂತಿ ಅಮ್ಮನವರು ರೂ. 40ಲಕ್ಷ ಮೊತ್ತದ ದೇಣಿಗೆಯನ್ನು ನೀಡಿದ ಕಾರ್ಯ ಶ್ಲಾಘನೀಯ. ಪ್ರತಿಯೋರ್ವರೂ ಇದೇ ರೀತಿ ತನು-ಮನ-ಧನಗಳಿಂದ ಸಹಕರಿಸಿ ಆರಾಧ್ಯಮೂರ್ತಿಯ ಪೂರ್ಣಾನುಗ್ರಹದೊಂದಿಗೆ ಜನುಮ ಪಾವನಗೊಳಿಸಬೇಕೆಂದು ತಿಳಿಸಿದರು.
ದಿ.ಕುಡಾಲುಬೀಡು ಮರಿಯಯ್ಯ ಬಲ್ಲಾಳ ಅರಸರು ಇವರ ಸ್ಮರಣಾರ್ಥ ಪತ್ನಿ ಅಡ್ವಳಬೀಡು ವಸಂತಿ ಅಮ್ಮನವರು ಶ್ರೀ ವಿಷ್ಣುಮಂಟಪ ಸಭಾಭವನ ನಿರ್ಮಾಣಕ್ಕೆ 40ಲಕ್ಷ ರೂಪಾಯಿಯ ಚೆಕ್ಕನ್ನು ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳ ದಿವ್ಯಹಸ್ತದ ಮುಖಾಂತರ ಕ್ಷೇತ್ರದ ಸಮಿತಿಯವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸಭಾಭವನ ನಿರ್ಮಾಣಕ್ಕೆ ಧನಸಹಾಯ ನೀಡಿದ ಅಡ್ವಳ ಬೀಡು ವಸಂತಿ ಅಮ್ಮನವರನ್ನು ಹಾಗೂ ಮನೆಯವರನ್ನು, ಸಭಾಭವನಕ್ಕೆ ಸ್ಥಳದಾನ ನೀಡಿದ ಗುಂಡಿಮನೆ ಸಂಜೀವ ನಾಯಕ್ ಅವರನ್ನು ಶಾಲುಹೊದಿಸಿ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಕ್ಷೇತ್ರದ ಪವಿತ್ರಪಾಣಿ ಐಪಂಜಿಗುಳಿ ಪುಂಡರೀಕಾಕ್ಷ ಕಡಂಬಳಿತ್ತಾಯ, ಗೌರವಾಧ್ಯಕ್ಷ ವೆಂಕಟಕೃಷ್ಣ ಕಡಂಬಳಿತ್ತಾಯ ಸಂಕದಮೂಲೆ, ಸೇವಾ ಸಮಿತಿಯ ಅಧ್ಯಕ್ಷರಾದ ಎ.ಬಿ ಗಂಗಾಧರ ಬಲ್ಲಾಳ್, ಕಾರ್ಯದರ್ಶಿ ಡಾ. ಮೋಹನ್‍ದಾಸ್ ರೈ ನಾಟೆಕಲ್ಲು, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ನಾಟೆಕಲ್ಲು, ಗೌರವ ಸಲಹೆಗಾರರಾದ ಕಲ್ಲಗ ಚಂದ್ರಶೇಖರ ರಾವ್, ನಿವೃತ್ತ ಉಪಜಿಲ್ಲಾಧಿಕಾರಿ ರಂಗಯ್ಯ ಬಲ್ಲಾಳ್, ನಿವೃತ್ತ ಮುಖ್ಯೋಪಾಧ್ಯಾಯರಾದ ಕಾರಡ್ಕ ಬೀಡು ಮರಿಯಯ್ಯ ಬಲ್ಲಾಳ್, ಪ್ರಶಾಂತ ಮಾಸ್ತರ್, ಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀಧರ ಬೆಳ್ಳೂರು, ಗಡಿನಾಡ ಸಾಹಿತ್ಯ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಖಂ, ಓಂಕಾರ್ ಯುವಕ ಸಂಘ ಉಪಾಧ್ಯಕ್ಷರಾದ ಪ್ರಸಾದ್ ಗುಂಡಿಮನೆ, ಮಹಿಳಾ ಸಂಘದ ಅಧ್ಯಕ್ಷೆ ಮಾಲತಿ, ಸೇವಾ ಸಮಿತಿಯ ಪದಾಧಿಕಾರಿಗಳು, ಊರಪರವೂರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೇವಾ ಸಮಿತಿಯ ಕಾರ್ಯದರ್ಶಿ ಡಾ. ಮೋಹನ್‍ದಾಸ್ ರೈ ಸ್ವಾಗತಿಸಿ ಪ್ರದೀಪ್ ಬೆಳ್ಳೂರು ವಂದಿಸಿದರು. ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ನಾಟೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

