ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸಲು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕೋವಿಡ್ ವ್ಯಾಪಿಸುತ್ತಿರುವುದರಿಂದ ಉಂಟಾಗಬಹುದಾದ ಯಾವುದೇ ತುರ್ತು ಸನ್ನಿವೇಶ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿರುವುದಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಕೋವಿಡ್ ಅವಲೋಕನಾ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಯಶಸ್ವಿಯಾಗಿ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಆರು ಕ್ಲಸ್ಟರ್‍ಗಳಿದ್ದು, ಜಿಲ್ಲೆಯಲ್ಲಿ 6670ಸಕ್ರಿಯ ಕೇಸ್‍ಗಳಿರುವುದಾಗಿ ತಿಳಿಸಿದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸುವಂತೆ ಸೂಚಿಸಲಾಗುವುದು. ಪಂಚಾಯಿತಿ-ನಗರಸಭೆ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನೂ ಆರಂಭಿಸಲಾಗುವುದು. ಕೇಂದ್ರೀಯ ವಿಶ್ವ ವಿದ್ಯಾಲಯದ ಲ್ಯಾಬ್ನಲ್ಲಿ ತಪಾಸಣಾ ವರದಿ ಕೈಸೇರುವಲ್ಲಿ ಉಂಟಾಗುತ್ತಿದ್ದ ವಿಳಂಬ ಪರಿಹರಿಸಲಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಆಕ್ಸಿಜನ್ ವಾರ್ ರೂಂ ಸಜ್ಜುಗೊಳಿಸುವ ಅನಿವಾರ್ಯತೆಯಿಲ್ಲ ಎಂದು ತಿಳಿಸಿದರು. ಎಲ್ಲ ತಾಲೂಕು, ಬ್ಲಾಕ್‍ಗಳಲ್ಲಿ ಸಿ.ಎಫ್.ಎಲ್.ಟಿ.ಸಿಗಾಗಿ ಕಾಯ್ದಿರಿಸಿದ ಕಟ್ಟಡಗಳು, ಆಕ್ಸಿಜನ್, ಐ.ಸಿ.ಯು ವೆಂಟಿಲೇಟರ್ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಸಭೆಯಲ್ಲಿ ಸೂಚಿಸಲಾಯಿತು.




