ನವದೆಹಲಿ/ ತಿರುವನಂತಪುರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತೆ ತೀವ್ರಗೊಂಡು ತೀವ್ರ ವಾಯುಭಾರ ನಿಮ್ನತೆಗೆ ತಿರುಗಿದೆ. ಇದು 12 ಗಂಟೆಗಳಲ್ಲಿ ಮತ್ತೆ ತೀವ್ರಗೊಂಡು ಅಸಾನಿ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಅಂಡಮಾನ್ ಸಮುದ್ರ ಮತ್ತು ಅದಕ್ಕೆ ಹೊಂದಿಕೊಂಡಿರುವ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಇಂದು ಮುಂಜಾನೆ 5.30ಕ್ಕೆ ವಾಯುಭಾರ ಕುಸಿತ ಉಂಟಾಗಿದೆ.
ಭೂಕಂಪದ ಕೇಂದ್ರವು ಪೆಸಿಫಿಕ್ ಮಹಾಸಾಗರದ ತಳದಲ್ಲಿ, ನಿಕೋಬಾರ್ ದ್ವೀಪಗಳ ಈಶಾನ್ಯಕ್ಕೆ 320 ಕಿ.ಮೀ ಮತ್ತು ಪೋರ್ಟ್ ಬ್ಲೇರ್‌ನ ಈಶಾನ್ಯಕ್ಕೆ 110 ಕಿ.ಮೀ.ದೂರದಲ್ಲಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಭಾರಿ ಪ್ರವಾಹದ ಭೀತಿ ಎದುರಾಗಿದೆ. ಇಂದು ದ್ವೀಪದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಣಾಮವಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಮಾಹೆ ಮತ್ತು ಪುದುಚೇರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಮುನ್ನೆಚ್ಚರಿಕೆಯ ಮೇರೆಗೆ ಕರಾವಳಿಯಲ್ಲಿ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ. ಕರಾವಳಿ ತೀರದ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೀಸುತ್ತಿರುವ ಗಾಳಿಯಿಂದಾಗಿ ಕೇರಳದಲ್ಲೂ ಮೀನುಗಾರಿಕೆ ನಿಷೇಧಿಸಲಾಗಿದೆ.




