ಲಂಡನ್: ಸ್ವಯಂ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಮಾಡುತ್ತಿರುವ ಮೋಸಕ್ಕೆ ಲೆಕ್ಕವೇ ಇಲ್ಲ ಬಿಡಿ. ಅನಾಥಾಶ್ರಮ, ವೃದ್ಧಾಶ್ರಮ ಎನ್ನುವ ಕಥೆಗಳನ್ನು ಕಟ್ಟಿ ವಿದೇಶಿ ಹಣವನ್ನು ಗಳಿಸಿ ಕೋಟ್ಯಧಿಪತಿಗಳಾಗುತ್ತಿದ್ದ ಹಲವಾರು ಸಂಘ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಇದಾಗಲೇ ಕಡಿವಾಣ ಹಾಕಿದೆ.
ಇದು ಭಾರತದ ಮಾತಾದರೆ ಅತ್ತ ಲಂಡನ್ನಲ್ಲಿಯೂ ಇಂಥದ್ದೇ ಒಬ್ಬ ಖದೀಮ ಇದೀಗ ಸಿಕ್ಕಿಬಿದ್ದಿದ್ದಾನೆ. ಒಂದಲ್ಲ, ಎರಡಲ್ಲ ಬರೋಬ್ಬರಿ 19 ಕೋಟಿ ರೂಪಾಯಿಗಳನ್ನು ಈತ ಸರ್ಕಾರಕ್ಕೆ ವಂಚಿಸಿದ್ದಾರೆ. 188 ಮಕ್ಕಳನ್ನು ಸೃಷ್ಟಿಸಿ ಹಲವಾರು ವರ್ಷಗಳಿಂದ ಈತ ಮೋಸ ಮಾಡುತ್ತಾ ಬಂದಿದ್ದಾನೆ.
ಈತನ ಹೆಸರು ಅಲಿ ಬಾನಾ ಮೊಹಮ್ಮದ್. ವಯಸ್ಸು 40. ಲಂಡನ್ನಲ್ಲಿ ಕೂಡ ಅನಾಥ ಮಕ್ಕಳನ್ನು ಬೆಳೆಸುವುದರಿದ್ದರೆ ಸರ್ಕಾರ ಹಣ ನೀಡುತ್ತದೆ. ಮಾತ್ರವಲ್ಲದೇ ತೆರಿಗೆ ವಿನಾಯಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅಲಿ ಬಾನಾ 188 ನಕಲಿ ಮಕ್ಕಳನ್ನು ತಾನು ಸಾಕುತ್ತಿರುವುದಾಗಿ ಹೇಳಿದ್ದಾನೆ. 188 ಹೆಸರುಗಳನ್ನ ದಾಖಲೆಗಳಲ್ಲಿ ತೋರಿಸಿ 19 ಕೋಟಿ ರೂಪಾಯಿ ವಂಚಿಸಿದ್ದಾನೆ. ಸದ್ಯ ಈತನನ್ನು 'ದರೋಡೆಕೋರರ ತಂದೆ' ಎಂದು ಕರೆಯಲಾಗುತ್ತಿದೆ.
ಈತ ಮಕ್ಕಳ ಮಾಹಿತಿಯನ್ನು ಡೈರಿಯಲ್ಲಿ ಬರೆದಿಟ್ಟಿದ್ದ. ನಂತರ ಆ ಹೆಸರಲ್ಲಿ ಸರ್ಕಾರದಿಂದ ಜೀವನಾಂಶ ಕೇಳುತ್ತಿದ್ದ. ಹೀಗೆ ಅನೇಕ ವರ್ಷಗಳಿಂದ 19 ಕೋಟಿ ರೂಪಾಯಿ ವಂಚಿಸಿದ್ದಾನೆ. ಇದೀಗ ಇಲ್ಲಿಯ ಸರ್ಕಾರ ತನಿಖೆ ನಡೆಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಕಂದಾಯ ಮತ್ತು ಕಸ್ಟಮ್ಸ್ ಇಲಾಖೆ ಕೂಡ ಇಷ್ಟೂ ವರ್ಷ ಈತನಿಗೆ ತೆರಿಗೆ ವಿನಾಯಿತಿಯನ್ನೂ ನೀಡಿತ್ತು.
ಈತನ ವಿರುದ್ಧ ಕೇಸ್ ದಾಖಲಾಗಿದೆ.ತನಿಖೆ ಕೈಗೊಂಡಾಗ ಈತ ತನ್ನ ಕುಟುಂಬಸ್ಥರ ನೆರವು ಪಡೆದು 70 ವಿವಿಧ ಹೆಸರುಗಳಲ್ಲಿ ಒಟ್ಟು 188 ನಕಲಿ ಮಕ್ಕಳನ್ನು ಸೃಷ್ಟಿಸಿರುವುದು ತಿಳಿದಿದೆ. ಕೋರ್ಟ್ ಈ ಪ್ರಕರಣದಲ್ಲಿ ಭಾಗಿಯಾದ ಆರು ಮಂದಿಗೆ 13 ವರ್ಷಗಳ ಶಿಕ್ಷೆ ವಿಧಿಸಿದೆ.




