ಚೆನ್ನೈ; ಈ ವರ್ಷದ ಮೊದಲ ವಾಯುಭಾರ ಕುಸಿತ ಬಂಗಾಳಕೊಲ್ಲಿಯಲ್ಲಿ ಉಂಟಾಗುವ ನಿರೀಕ್ಷೆ ಇದೆ. ಶುಕ್ರವಾರದಿಂದ ಮುಂದಿನ ವಾರದ ತನಕ ದೇಶದ ವಿವಿಧ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಬಂಗಾಳಕೊಲ್ಲಿಯಲ್ಲಿಯ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಾಣಿಸಿವೆ. 2022ನೇ ಸಾಲಿನ ಮೊದಲ ವಾಯುಭಾರ ಕುಸಿತ ಇದಾಗಿದೆ. ಅಲ್ಲದೇ ಹಲವು ವರ್ಷಗಳ ಬಳಿಕ ಮಾರ್ಚ್ ತಿಂಗಳಿನಲ್ಲಿ ವಾಯುಭಾರ ಕುಸಿತವಾಗುತ್ತಿದೆ.
ಶುಕ್ರವಾರದಿಂದ ಮುಂದಿನ ವಾರದ ತನಕ ತಮಿಳುನಾಡಿನ ಉತ್ತರ ಭಾಗ, ಕೇರಳದ ದಕ್ಷಿಣ ಭಾಗ, ಶ್ರೀಲಂಕಾದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ಪರಿಚಲನೆಯು ಮಲಕ್ಕಾ ಜಲಸಂಧಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಇದೆ ಎಂದು ಅಂದಾಜಿಸಲಾಗಿದೆ.ವಾಯುಭಾರ ಕುಸಿತ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿ ಚಲನೆ, ದಿಕ್ಕು ಮತ್ತು ಯಾವ ಪ್ರಮಾಣದ ತೀವ್ರತೆ ಉಂಟಾಗಬಹುದು ಎಂಬ ಬಗ್ಗೆ ಖಚಿತವಾದ ಮಾಹಿತಿ ಸಿಗಲಿದೆ. ಮೀನುಗಾರರಿಗೆ ಎಚ್ಚರಿಕೆ ಇಂದ ಇರಲು ಸೂಚನೆ ಕೊಡಲಾಗಿದೆ.
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಬುಧವಾರ ಸಂಜೆಯಿಂದಲೇ ಉಷ್ಣಾಂಶ ಕುಸಿತಗೊಂಡು ಮೋಡ ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಶುಕ್ರವಾರದ ಬಳಿಕ ಶ್ರೀಲಂಕಾ ಕಡೆ ಸಾಗುವ ನಿರೀಕ್ಷೆ ಇದ್ದು, ಭಾರತದಲ್ಲಿ ಮಳೆ ಕಡಿಮೆಯಾಗಲಿದೆ. ಒಡಿಶಾ ಮೇಲೆ ಪ್ರಭಾವ; ಈ ವಾಯುಭಾರ ಕುಸಿತದ ಪರಿಣಾಮದಿಂದ ಒಡಿಶಾದ ಉತ್ತರ ಭಾಗದ ಕಿಯೋಂಜಾರ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗಲಿದೆ. ಒಡಿಶಾದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಜಗತ್‌ಸಿಂಗ್‌ಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಉಂಟಾಗಲಿದೆ ಮತ್ತು ಪುರಿ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಸಾಧಾರಣ ಮಂಜು ಕವಿಯಲಿದೆ. ಕಳೆದ ವರ್ಷ ಹವಾಮಾನ ಬದಲಾವಣೆ ಪರಿಣಾಮ ಜುಲೈ ತಿಂಗಳ ಬಳಿಕ ಚಂಡಮಾರುತದ ಪ್ರಭಾವದಿಂದ ಡಿಸೆಂಬರ್ ತನಕ ಅಕಾಲಿಕ ಮಳೆಯಾಗಿತ್ತು. ದೇಶದ ವಿವಿಧ ರಾಜ್ಯಗಳ ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಫೆಬ್ರವರಿ ಅಂತ್ಯ ಮತ್ತು ಮಾರ್ಚ್‌ನಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಂಡುಬಂದಿವೆ. ಹಲವು ವರ್ಷಗಳ ಬಳಿಕ ಮಾರ್ಚ್ ತಿಂಗಳಿನಲ್ಲಿ ವಾಯುಭಾರ ಕುಸಿತವಾಗುತ್ತಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಕೊಲ್ಲಿಯಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಎಚ್ಚರದಿಂದ ಇರುವಂತೆ ಮೀನುಗಾರಿಗೆ ಸೂಚಿಸಲಾಗಿದೆ. ಮಾರ್ಚ್ 4 ರಿಂದ 6ರ ತನಕ ಪಶ್ಚಿಮ, ಉತ್ತರ ತಮಿಳುನಾಡು, ಪುದುಚೇರಿ, ಕಾರೈಕಲ್, ಆಂಧ್ರ ಪ್ರದೇಶ, ಯಾನಂ, ಕೇರಳ ಮತ್ತು ಮಾಹೆಯಲ್ಲಿ ಹವಾಮಾನ ಬದಲಾವಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ತಮಿಳುನಾಡು ಕರಾವಳಿ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಾಧಾರಣ ಮಳೆಯಾಗುತ್ತದೆ. ಆದರೆ ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಮಳೆಯಾಗಲಿದ್ದರೂ ಮೋಡ ಕವಿದ ವಾತಾವರಣ, ಗಾಳಿಯ ಆರ್ಭಟ ಜೋರಾಗಿರಬಹುದು ಎಂದು ಅಂದಾಜಿಸಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳು, ದಕ್ಷಿಣ ಒಳನಾಡಿನಲ್ಲಿ ಹವಾಮಾನ ಬದಲಾವಣೆಯಾಗಬಹುದು.




