ಕಾಸರಗೋಡು: ನೀಲೇಶ್ವರ ಜನಮೈತ್ರಿ ಪೋಲೀಸ್, ನೀಲೇಶ್ವರ ಪೋಲೀಸ್ ಠಾಣೆ, ನೀಲೇಶ್ವರ ಅಬಕಾರಿ ರೇಂಜ್ ಕಛೇರಿ ಹಾಗೂ ಕಿನಾನೂರು ಕರಿಂದಳ ಗ್ರಾಮ ಪಂಚಾಯತ್ ವತಿಯಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ತರಗತಿಗಳನ್ನು ನಡೆಸಲಾಯಿತು. ಕಿನಾನೂರು ಕರಿಂದಳ ಗ್ರಾಮ ಪಂಚಾಯತ್ ಮಟ್ಟದ ಉದ್ಘಾಟನೆಯನ್ನು ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಿನಾನೂರು - ಕರಿಂದಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ. ರವಿ ಉದ್ಘಾಟಿಸಿದರು.
ವಾರ್ಡ್ ಸದಸ್ಯೆ ಪಿ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಡಿವೈಎಸ್ಪಿ ಡಾ. ವಿ. ಬಾಲಕೃಷ್ಣ ಪ್ರಧಾನ ಭಾಷಣ ಮಾಡಿದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಅಜಿತಕುಮಾರ್, ಮುಖ್ಯಶಿಕ್ಷಕ ಎ.ಪಿ.ಶ್ರೀನಿವಾಸನ್, ಬ್ಲಾ.ಪಂ.ಅಧ್ಯಕ್ಷ ಕೆ.ವಿ.ಭರತನ್, ಜನಮೈತ್ರಿ ಬೀಟ್ ಅಧಿಕಾರಿಗಳಾದ ಪ್ರದೀಪನ್ ಕೊತ್ತೋಳಿ, ಎಂ.ಶೈಲಜಾ, ಸಿಡಿಎಸ್ ಸದಸ್ಯೆ ಕೆ.ವಿ.ಶಾರಿಕಾ ಮಾತನಾಡಿದರು. ಅಬಕಾರಿ ಪ್ರಿವೆಂಟಿವ್ ಆಫೀಸರ್ ಎನ್.ಜಿ.ರಘುನಾಥನ್ ಮಾದಕ ವಸ್ತು ವಿರೋಧಿ ತರಗತಿ ನಡೆಸಿದರು. ಕಿನಾನೂರು ಕರಿಂದಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಮಾತನಾಡಿ, ಎಲ್ಲ ವಾರ್ಡ್ ಗಳಲ್ಲಿ ಮಾದಕ ವಸ್ತು ವಿರೋಧಿ ಜಾಗೃತ ಸಮಿತಿ ರಚಿಸಿ ಜಾಗೃತಿ ತರಗತಿ ನಡೆಸಲಾಗುವುದು ಎಂದರು.




