HEALTH TIPS

ಜಗತ್ತಿನ ಬಲಾಢ್ಯ ದೇಶ, ಅತ್ಯಾಧುನಿಕ ಸೇನೆ.. ಆದರೂ ಪುಟ್ಟ ರಾಷ್ಟ್ರ ಉಕ್ರೇನ್ ಮಣಿಸಲು ರಷ್ಯಾಗೆ ಸಾಧ್ಯ ವಾಗುತ್ತಿಲ್ಲ ಏಕೆ?

    ಪ್ಯಾರಿಸ್: ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಜಗತ್ತಿನ 2ನೇ ಬಲಿಷ್ಟ ರಾಷ್ಟ್ರ ರಷ್ಯಾ ಸೇನಾ ದಾಳಿ ಅರಂಭಿಸಿ ಬರೊಬ್ಬರಿ 2 ವಾರಗಳೇ ಕಳೆದಿವೆ. ಆದರೂ ಈ ಯೋಜನೆಯಲ್ಲಿ ರಷ್ಯಾ ತನ್ನ ಗುರಿ ತಲುಪಲು ಸಾಧ್ಯವಾಗಿಲ್ಲ.. 

           ತಮ್ಮ ಮೇಲೆ ಮುಗಿಬಿದ್ದಿರುವ ರಷ್ಯಾ ಸೇನೆಯನ್ನು ಉಕ್ರೇನಿಯನ್ ಪಡೆಗಳು ಸಾಕಷ್ಟು ಸಾವು-ನೋವಿನ ಹೊರತಾಗಿಯೂ ಪ್ರತಿರೋಧದೊಂದಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆ ಮೂಲಕ ಅದು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಪ್ರಶಂಸೆಗಳನ್ನು ಗಳಿಸಿದೆ. ಉತ್ತಮ ತಯಾರಿ, ರಾಷ್ಟ್ರೀಯ ಒಗ್ಗಟ್ಟು ಮತ್ತು ರಷ್ಯಾದ ತಪ್ಪು ಸಂಯೋಜನೆಯಿಂದಾಗಿ ಸಂಖ್ಯಾತ್ಮಕವಾಗಿ ಬಲಾಢ್ಯವಾದ ಸೈನ್ಯದ ವಿರುದ್ಧ  ಉಕ್ರೇನ್ ಸೆಟೆದು ನಿಂತಿದೆ.

          ಆದಾಗ್ಯೂ ಉಕ್ರೇನ್ ಭವಿಷ್ಯ ಅಸ್ಪಷ್ಟವಾಗಿಯೇ ಉಳಿದಿದೆಯಾದರೂ, ರಷ್ಯನ್ನರ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ತಕ್ಕ ಮಟ್ಟಿಗೆ ಉಕ್ರೇನ್ ಯಶಸ್ವಿಯಾಗಿದೆ. ಉಕ್ರೇನ್ ನ ಈ ಯಶಸ್ಸಿಗೆ ಕಾರಣವಾದ ಅಂಶಗಳು ಏನೇನು?

             ರಷ್ಯಾದೊಂದಿಗಿನ ಸಂಬಂಧ ಹಳಸಿದಾಗಿನಿಂದಲೂ ಉಕ್ರೇನ್ ಸೇನಾ ಮೂಲಸೌಕರ್ಯಗಳನ್ನು ಹೆಚ್ಚಿಸಿತ್ತು. ಪ್ರಮುಖವಾಗಿ ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ, 2014 ರ ನಂತರ ತನ್ನ ಸಶಸ್ತ್ರ ಪಡೆಗಳನ್ನು ಗಣನೀಯವಾಗಿ ಬಲಪಡಿಸಿತು. ರಷ್ಯಾವು ಕ್ರೈಮಿಯಾದ ಉಕ್ರೇನಿಯನ್ ಪರ್ಯಾಯ ದ್ವೀಪವನ್ನು ಮಿಂಚಿನ ಕಾರ್ಯಾಚರಣೆಯಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ರಷ್ಯಾದ ಪರವಾದ ಪ್ರತ್ಯೇಕತಾವಾದಿಗಳು ದೇಶದ ಪೂರ್ವ ಭಾಗಗಳನ್ನು ಆಕ್ರಮಿಸಿಕೊಂಡರು. ಇದು ಉಕ್ರೇನ್ ತನ್ನ ಸೇನಾ ಶಕ್ತಿಗೆ ಪ್ರಬಲ ಪ್ರಶ್ನೆಯನ್ನೊಡ್ಡಿತು. 2016 ರಲ್ಲಿ, ಓಂಖಿಔ ಮತ್ತು ಉಕ್ರೇನಿಯನ್ ವಿಶೇಷ ಪಡೆಗಳಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈಗ ಆ ವಿಶೇಷ ಪಡೆಗಳ ಸಂಖ್ಯೆ 2,000ದಷ್ಟಿದೆ. ಅಲ್ಲದೆ ಈ ಪಡೆಗಳು ನಾಗರಿಕ ಸ್ವಯಂಸೇವಕರಿಗೆ ಸಹಾಯ ಮಾಡಲು ಸಮರ್ಥವಾಗಿದೆ.

       ಬಗ್ಗೆ ಮಾತನಾಡಿರುವ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೌಗ್ಲಾಸ್ ಲಂಡನ್ ಅವರು, 'ಉಕ್ರೇನಿಯನ್ನರು ರಷ್ಯಾದ ಆಕ್ರಮಣವನ್ನು ವಿರೋಧಿಸಲು ಕಳೆದ ಎಂಟು ವರ್ಷಗಳಿಂದ ಯೋಜನೆ, ತರಬೇತಿ ಮತ್ತು ತಮ್ಮನ್ನು ಸಜ್ಜುಗೊಳಿಸಿಕೊಂಡಿದ್ದಾರೆ. ಯುದ್ಧಾರಂಭದಲ್ಲಿ ಉಕ್ರೇನ್ ಬೆಂಬಲಕ್ಕೆ ನ್ಯಾಟೋ ಮತ್ತು ಅಮೆರಿಕ ಬೆಂಬಲಿತ ಪಡೆಗಳು ನಿಲ್ಲುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಉಕ್ರೇನ್ ನಂಬಿಕೆ ಆರಂಭದಲ್ಲೇ ಉಲ್ಟಾ ಹೊಡೆದಿತ್ತು. ಇದು ಉಕ್ರೇನ್ ರಷ್ಯಾ ವಿರುದ್ಧ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು ಕಾರಣವಾಯಿತು. 

          ಸೋವಿಯಕ್ ಒಕ್ಕೂಟದ ಅಡಿಯಲ್ಲಿ ಮಾಸ್ಕೋ ನಿಯಂತ್ರಿಸಲ್ಪಟ್ಟ ಪ್ರದೇಶದೊಂದಿಗೆ ಸೋವಿಯತ್-ಯುಗದ ಪರಿಚಿತತೆಯನ್ನು ಅವಲಂಬಿಸಿರುವ ರಷ್ಯಾ, ಉಕ್ರೇನಿಯನ್ ಪಡೆಗಳ ಹೋಮ್-ಟರ್ಫ್ ಪ್ರಯೋಜನವನ್ನು ಕಡಿಮೆ ಅಂದಾಜು ಮಾಡಿತ್ತು. ಇದು ಭೂಪ್ರದೇಶದ ಜ್ಞಾನ ಎರಡನ್ನೂ ಒಳಗೊಂಡಿತ್ತು. ಸ್ಥಳೀಯರೂ ಕೂಡ ಸೇನೆ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ರಷ್ಯಾ ಸೇನೆ ಅಂದಾಜಿಸಿರಲಿಲ್ಲ. ಇದು ಅನಿಯಮಿತ ಯುದ್ಧದ ಇಂತಹ ಸನ್ನಿವೇಶದಲ್ಲಿ, ದುರ್ಬಲ ಶಕ್ತಿಗಳು ತಮ್ಮ ಪ್ರಬಲ ಎದುರಾಳಿಗಳ ಮೇಲೆ ಹೊಂದಿರುವ ಅನುಕೂಲಗಳನ್ನು ಗರಿಷ್ಠಗೊಳಿಸಬಹುದು. ಭೂಪ್ರದೇಶ, ಸ್ಥಳೀಯ ಜ್ಞಾನ ಮತ್ತು ಸಾಮಾಜಿಕ ಸಂಪರ್ಕಗಳ ಅನುಕೂಲಗಳು ಉಕ್ರೇನ್ ರಷ್ಯಾ ಸೇನೆಯ ಆಕ್ರಮಣವನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಹಾರಗಳ ಕಾಲೇಜಿನ ಪ್ರಾಧ್ಯಾಪಕ ಸ್ಪೆನ್ಸರ್ ಮೆರೆಡಿತ್ ಹೇಳಿದ್ದಾರೆ.

          ಅಂತೆಯೇ ರಷ್ಯಾವು ಕೈವ್‌ನಂತಹ ನಗರಗಳೊಳಗೆ ನುಸುಳಲು ಪ್ರಯತ್ನಿಸಿದಾಗ ನಾಗರೀಕರ ಹೋರಾಟವು ಅಭಿವೃದ್ಧಿಗೊಂಡರೆ ಸವಾಲುಗಳು ಮತ್ತಷ್ಟು ಹೆಚ್ಚಾಗುತ್ತವೆ. ಅದು ಎಲ್ಲವನ್ನೂ ಬದಲಾಯಿಸುತ್ತದೆ. ರಷ್ಯನ್ನರು ಪ್ರತಿ ಬೀದಿ ಮೂಲೆಯಲ್ಲಿ ತೊಂದರೆಗೆ ಸಿಲುಕುತ್ತಾರೆ ಎಂದು ಫ್ರೆಂಚ್ ಮಿಲಿಟರಿ ಮೂಲವು ಹೇಳಿದೆ. 

                 ಒಗ್ಗಟ್ಟು

           ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೇತೃತ್ವದಲ್ಲಿ, ರಷ್ಯಾ ರಾಜಧಾನಿ ಕೀವ್ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ತನ್ನ ಜೀವಕ್ಕೆ ಅಪಾಯದ ಹೊರತಾಗಿಯೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೀವ್ ನಲ್ಲಿಯೇ ಉಳಿದುಕೊಂಡಿದ್ದಾರೆ. ಆ ಮೂಲಕ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಆಳವಾದ ಸ್ಥಿತಿಸ್ಥಾಪಕತ್ವವನ್ನು ತೋರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರು ಮುಂಚೂಣಿಯಲ್ಲಿ ಸ್ವಯಂಸೇವಕರಾಗಿರುತ್ತಾರೆ, ಉಕ್ರೇನ್‌ಗೆ ಪ್ರಾದೇಶಿಕ ಪಡೆಗಳ ಕ್ಷಿಪ್ರ ತರಬೇತಿ ಮತ್ತು ಲಘು ಶಸ್ತ್ರಾಸ್ತ್ರಗಳ ಬಳಕೆಯಿಂದ ತನ್ನ ಅಟ್ರಿಷನ್ ಯುದ್ಧ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದಕ್ಕಿಂತ ಬೇರೆ ಆಯ್ಕೆ ಇರಲಿಲ್ಲ. ಹಾಲಿ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗಿದೆ. ನಾಗರೀಕರು ಕೂಡ ಶಸ್ತ್ರಾಸ್ತ್ರ ಹಿಡಿದು ಹೋರಾಡುತ್ತಿದ್ದಾರೆ ಎಂದು ನಿವೃತ್ತ ಫ್ರೆಂಚ್ ಕರ್ನಲ್ ಮೈಕೆಲ್ ಗೋಯಾ ಹೇಳಿದ್ದಾರೆ.

                    ಕಾರ್ಯತಂತ್ರದ ದೋಷಗಳು

              ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದ ನಂತರ ಆಕ್ರಮಣದ ಆರಂಭಿಕ ದಿನಗಳಲ್ಲಿ ರಷ್ಯಾವು ಕಾರ್ಯತಂತ್ರದ ದೋಷಗಳನ್ನು ಮಾಡಿದೆ ಎಂದು ಮಿಲಿಟರಿ ವಿಶ್ಲೇಷಕರು ಹೇಳುತ್ತಾರೆ. ಆರಂಭಿಕ ಹಂತದಲ್ಲಿ ತುಂಬಾ ಕಡಿಮೆ ಭೂಸೇನಾ ಪಡೆಗಳನ್ನು ಕಳುಹಿಸಿತು. ಅಂತೆಯೇ ಕಾಲ್ದಳ ಮತ್ತು ವಾಯುಪಡೆಗಳು ಒಟ್ಟಾಗಿ ಕೆಲಸ ಮಾಡಲು ವಿಫಲವಾಗಿದೆ. ಪ್ರಾರಂಭದಲ್ಲಿ ರಷ್ಯಾ ರಾಜಧಾನಿ ಕೀವ್ ಅನ್ನು ತ್ವರಿತವಾಗಿ ವಶಕ್ಕೆ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕೀವ್ ಅಷ್ಟು ಸುಲಭವಾಗಿರಲಿಲ್ಲ ಎಂದು  ಅಮೆರಿಕದಲ್ಲಿನ ನೌಕಾ ವಿಶ್ಲೇಷಣೆಗಳ ಕೇಂದ್ರದಲ್ಲಿ ರಷ್ಯಾ ಅಧ್ಯಯನ ಕಾರ್ಯಕ್ರಮದ ನಿರ್ದೇಶಕ ಮೈಕೆಲ್ ಕೋಫ್ಮನ್ ಹೇಳಿದ್ದಾರೆ.

                     ಮಾನಸಿಕ ಭಯ

              ಇತ್ತೀಚಿನ ವಾರಗಳಲ್ಲಿ ಹತ್ತಾರು ಸಾವಿರ ಸೈನಿಕರನ್ನು ಉಕ್ರೇನ್‌ನ ಗಡಿಯ ಸಮೀಪದಲ್ಲಿ ನಿಯೋಜಿಸುವ ಮೂಲಕ ರಷ್ಯಾ ವಿಶ್ವದಾದ್ಯಂತ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಆದರೆ ಇದಕ್ಕೂ ಮಾನಸಿಕವಾಗಿ ಸಿದ್ಧರಾಗಿದ್ದ ಉಕ್ರೇನ್ ಪಡೆಗಳು ತಿರುಗೇಟು ನೀಡಲು ಸಶಕ್ತವಾಗಿದ್ದವು. ಅಲ್ಲದೆ ಉಕ್ರೇನ್ ಮೇಲಿನ ಯುದ್ಧಕ್ಕೆ ಸ್ವತಃ ರಷ್ಯಾ ಸೇನೆಯ ಕೆಲ ಸೈನಿಕರೇ ಮಾನಸಿಕವಾಗಿ ಸಿದ್ಧರಿರಲಿಲ್ಲ. ಅಲ್ಲದೆ ಉಭಯ ದೇಶಗಳಲ್ಲಿನ ಸ್ಥಳೀಯ ಭಾಷಾ ಸಂಪರ್ಕ ಕೂಡ ಇದರಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ನೆರೆ-ಹೊರೆಯವರ ಮೇಲೆ ಯುದ್ಧ ರಷ್ಯಾದ ಕೆಲ ಸೈನಿಕರಿಗೇ ಬೇಡವಾಗಿತ್ತು ಎಂದು ಫ್ರೆಂಚ್ ಸೇನಾಧಿಕಾರಿಯೊಬ್ಬರು ಅಭಿಪ್ರಾಯುಪಟ್ಟಿದ್ದಾರೆ.

             ಒಟ್ಟಾರೆ ಇದೀಗ ರಷ್ಯಾ ಸೇನೆ ತನ್ನ ಬಲಾಬಲವನ್ನು ಹೆಚ್ಚಿಸಿಕೊಂಡಿದ್ದು ಆದಷ್ಟು ಬೇಗನೇ ಉಕ್ರೇನ್ ಅನ್ನು ತನ್ನ ತೆಕ್ಕೆಗೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಉಕ್ರೇನ್ ರಷ್ಯಾ ಪಾಲಾಗಬಹುದು ಎಂದು ಮತ್ತೆ ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries