ಕಾಸರಗೋಡು: ಸಮಾಜದಲ್ಲಿ ಹೆಚ್ಚಿನ ಗೌರವಾದರಗಳಿಗೆ ಕೃಷಿಕರು ಅರ್ಹರಾಗಿದ್ದು, ಅವರ ಬೇಡಿಕೆಗಳಿಗೆ ಸ್ಪಂದಿಸುವ ಮನೋಭಾವವನ್ನು ಸರ್ಕಾರ ಮತ್ತು ಸಮಾಜ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ ಎಂದು ಕೇರಳ ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲೆಯ ಪಿಲಿಕ್ಕೋಡಿನ ಉತ್ತರ ವಲಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ತರಬೇತಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಅತಿಯಾದ ರಾಸಾಯನಿಕ ಹಾಗೂ ವಿಷಾಂಶ ಹೊಂದಿದ ತರಕಾರಿಯನ್ನು ನಾವಿಂದು ಸೇವಿಸುತ್ತಿದ್ದೇವೆ. ಇದಕ್ಕಾಗಿ ತರಕಾರಿ ಕೃಷಿಯಲ್ಲಿ ನಾವು ಸ್ವಾವಲಂಬಿಗಳಾದಲ್ಲಿ ರೋಗದಿಂದ ಒಂದಷ್ಟು ಮುಕ್ತಿ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪಿಲಿಕ್ಕೋಡ್ ಗ್ರಾಪಂ ಅಧ್ಯಕ್ಷೆ ಪ್ರಸನ್ನ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವರು ಟ್ರೋಫಿ ವಿತರಿಸಿದರು. ಹಿರಿಯ ವಿಜ್ಞಾನಿಗಳು, ಸಾಧಕರನ್ನು ಗೌರವಿಸಿದರು. ಜೈವ ಗೊಬ್ಬರ ಬಳಸಿ ತಯಾರಿಸಿದ ಅಕ್ಕಿಯ ವಿತರಣಾ ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷೆ ಪ್ರಸನ್ನ ಕುಮಾರಿ ನೆರವೇರಿಸಿದರು. ತೋಟದ ಬೆಳೆಗಳ ಪ್ರದರ್ಶನವನ್ನು ಸಿಪಿಸಿಆರ್‍ಐ ವಿಜ್ಞಾನಿ ವಿನಾಯಕ ಹೆಗ್ಡೆ ಉದ್ಘಾಟಿಸಿದರು. ಕೃಷಿಕರ ಕಲ್ಯಾಣ ಯೋಜನೆ, ಕೃಷಿ ತೋಟ, ಫಾರ್ಮ್‍ಹೌಸ್ ಸಂದರ್ಶನ ನಡೆಯಿತು. ಮಾ. 5ರಂದು ವಿವಿಧ ಉದ್ಯೋಗ ತರಬೇತಿ ಶಿಬಿರ, ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ.

