ಗೋರಖ್ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದಕ್ಕಾಗಿ ಸ್ಥಳೀಯರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಮುಸ್ಲಿಂ ವ್ಯಕ್ತಿ ಬಾಬರ್ ಅಲಿ(25) ಭಾನುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಮಾರ್ಚ್ 28, 2022
ಗೋರಖ್ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದಕ್ಕಾಗಿ ಸ್ಥಳೀಯರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಮುಸ್ಲಿಂ ವ್ಯಕ್ತಿ ಬಾಬರ್ ಅಲಿ(25) ಭಾನುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 20ರಂದು ಉತ್ತರ ಪ್ರದೇಶದ ಖುಷಿನಗರದಲ್ಲಿ ಹಲ್ಲೆ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದು, ಪಾರ್ಥಿವ ಶರೀರವನ್ನು ಗ್ರಾಮಕ್ಕೆ ಕರೆತರಲಾಯಿತು. ಈ ವೇಳೆ ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು ಕುಟುಂಬಸ್ಥರು, ಶವಸಂಸ್ಕಾರಕ್ಕೆ ನಿರಾಕರಿಸಿದರು.
ಕೊನೆಗೆ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕರು, ಕುಟುಂಬಸ್ಥರನ್ನು ಸಮಾಧಾನಪಡಿಸಿ, ಶವಸಂಸ್ಕಾರ ನೆರವೇರಿಸುವಂತೆ ಮನವೊಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇತರರನ್ನು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಆಗಿದ್ದೇನು?
ಈಚೆಗೆ ಮುಕ್ತಾಯವಾದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅಲಿ ಅವರು ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಅಲ್ಲದೆ ಫಲಿತಾಂಶದ ದಿನ ಅಲಿ ಅವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಲ್ಲದೆ, ಸಿಹಿ ಹಂಚಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಲಿ ಸುತ್ತಮುತ್ತಲಿನ ಮನೆಯವರು, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಮಾರ್ಚ್ 20ರಂದು ಸಂತ್ರಸ್ತನನ್ನು ಸುತ್ತುವರಿದ ದುಷ್ಕರ್ಮಿಗಳು ಬಡಿಗೆಗಳಿಂದ ಹಲ್ಲೆ ನಡೆಸಿದ್ದರು. ತಪ್ಪಿಸಿಕೊಳ್ಳಲು ಮನೆ ಮೇಲೆ ಹತ್ತಿದ್ದಾಗ, ಅಲ್ಲಿಗೂ ತೆರಳಿದ್ದ ದುಷ್ಕರ್ಮಿಗಳು ಅವರನ್ನು ಮನೆಯ ಮೇಲಿನಿಂದ ನೂಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.