HEALTH TIPS

ಧೂಮಪಾನಿಗಳ ಹೊಗೆಯಿಂದಲೂ ಭೀಕರ ಆರ್ಥಿಕ ಹೊರೆ; ಹೊಸ ಅಧ್ಯಯನ

             ಬೆಂಗಳೂರು: ಜರ್ನಲ್ ಆಫ್ ನಿಕೋಟಿನ್ ಅಂಡ್ ಟೊಬ್ಯಾಕೋ ರಿಸರ್ಚ್‌ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನವು ಭಾರತದಲ್ಲಿ ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಭೀಕರ  ಆರ್ಥಿಕ ಹೊರೆಯನ್ನು ಮೊದಲ ಬಾರಿಗೆ ಪರಿಮಾಣ ಮಾಡಿದೆ. 

              ಈ ಅಧ್ಯಯನದ ಪ್ರಕಾರ, ದೇಶದ ವಾರ್ಷಿಕ ಆರೋಗ್ಯ ವೆಚ್ಚಗಳ ಪೈಕಿ 567 ಬಿಲಿಯನ್ ರೂಪಾಯಿ ವೆಚ್ಚಕ್ಕೆ ಧೂಮಪಾನದ ಹೊಗೆ ಕಾರಣವಾಗಿದೆ. ಇದು ಒಟ್ಟು ವಾರ್ಷಿಕ ಆರೋಗ್ಯ ವೆಚ್ಚದ ಶೇಕಡಾ 8 ರಷ್ಟಾಗಿದ್ದು, ತಂಬಾಕು ಬಳಕೆಯಿಂದ ಉಂಟಾಗುವ 1773.4 ಬಿಲಿಯನ್ ರೂಪಾಯಿಗಳ (27.5 ಬಿಲಿಯನ್ ಯುಎಸ್ ಡಾಲರ್) ವಾರ್ಷಿಕ ಆರ್ಥಿಕ ಹೊರೆಯಿಂದ ಹೊರತಾಗಿದೆ. ಈ ಹೊಸ ಅಧ್ಯಯನ ಧೂಮಪಾನದ ಹೊಗೆಯಿಂದ ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಅಪಾರ ಆರ್ಥಿಕ ನಷ್ಟದ ಮೇಲೆ ಮೊದಲ ಬಾರಿಗೆ ಬೆಳಕು ಚೆಲ್ಲಿದೆ. ಧೂಮಪಾನದ ಹೊಗೆಯಿಂದ ಆಗುತ್ತಿರುವ ಈ ಆರ್ಥಿಕ ಹೊರೆ ಮಹಿಳೆಯರು, ಯುವಕರು, ಕಡಿಮೆ ಆದಾಯ ಹೊಂದಿರುವವರು, ಮುಂತಾದ ಅತ್ಯಂತ ದುರ್ಬಲ ವರ್ಗಗಳ ಮೇಲೆ ಅಸಮನಾದ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

             ಧೂಮಪಾನದ ಹೊಗೆಗೆ ನಿರಂತರವಾಗಿ ಒಡ್ಡಿಕೊಂಡ ಧೂಮಪಾನಿಗಳಲ್ಲದ 15 ವರ್ಷ ಮತ್ತು ಮೇಲ್ಪಟ್ಟವರ ಆರೋಗ್ಯದ ವೆಚ್ಚವನ್ನು ಪರಿಮಾಣ ಮಾಡಲು, ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್‌ನ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ರಿಜೋ ಎಂ. ಜಾನ್ ನೇತೃತ್ವದ ಸಂಶೋಧಕರು ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳನ್ನು ಮತ್ತು ಹರಡುವಿಕೆ ಆಧರಿಸಿ ಹೊರಿಸಬಹುದಾದ ಅಪಾಯ ವಿಧಾನವನ್ನು ((prevalence-based attributable risk approach) ಬಳಸಿದ್ದಾರೆ. ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಒಟ್ಟು ಆರ್ಥಿಕ ವೆಚ್ಚದ ಒಂದು ಭಾಗವನ್ನು ಮಾತ್ರ ಈ 567 ಬಿಲಿಯನ್ ರೂಪಾಯಿ ಪ್ರತಿನಿಧಿಸುತ್ತದೆ. ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವಿಕೆಯಿಂದ ಉಂಟಾಗುವ ಉತ್ಪಾದನ ಶಕ್ತಿಯಲ್ಲಿ ಇಳಿಕೆ, ಅಸ್ವಸ್ಥತೆ, ಅನಾರೋಗ್ಯದಿಂದ  ಮರಣ ಮತ್ತು ಅಕಾಲಿಕ ಸಾವುಗಳಿಂದಾಗುವ ಹೆಚ್ಚುವರಿ ಪರೋಕ್ಷ ಆರ್ಥಿಕ ವೆಚ್ಚಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಇವುಗಳನ್ನೂ ಪರಿಗಣಿಸಿದ್ದಲ್ಲಿ, ಆರ್ಥಿಕ ವೆಚ್ಚದ ಅಂತಿಮ ಅಂಕಿಅಂಶ ಮತ್ತಷ್ಟು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

              ಧೂಮಪಾನ ಮತ್ತು ಅದರ ಹೊಗೆಗೆ ಒಡ್ಡಿಕೊಳ್ಳುವಿಕೆಯಿಂದ ಪ್ರತಿ ವರ್ಷ ಸುಮಾರು 1.2 ಮಿಲಿಯನ್ ಭಾರತೀಯರು ಮೃತಪಡುತ್ತಿದ್ದಾರೆ. ಭಾರತದಲ್ಲಿ 100 ಮಿಲಿಯನ್‌ಗೂ ಹೆಚ್ಚು ಧೂಮಪಾನಿಗಳಿದ್ದು, ಧೂಮಪಾನಿಗಳಲ್ಲದವರು ಮನೆಗಳಲ್ಲಿ, ಕೆಲಸ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಹೊಗೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಧೂಮಪಾನ ಮಾಡದ ಮಕ್ಕಳು ಮತ್ತು ವಯಸ್ಕರನ್ನು ರೋಗ ಮತ್ತು ಅಕಾಲಿಕ ಮರಣಕ್ಕೀಡು ಮಾಡುವ 7,000ಕ್ಕೂ ಹೆಚ್ಚು ರಾಸಾಯನಿಕಗಳ ಮಾರಣಾಂತಿಕ ಮಿಶ್ರಣವಾದ ಧೂಮಪಾನದ ಹೊಗೆಗೆ ‘ಸುರಕ್ಷಿತ ಮಟ್ಟದ ಒಡ್ಡುಕೊಳ್ಳುವಿಕೆ’ ಎಂಬುದೇ ಇಲ್ಲ.

              “ತಂಬಾಕು ಬಳಕೆಯನ್ನು ತಗ್ಗಿಸುವಲ್ಲಿ ಭಾರತ ಒಂದಷ್ಟು ಯಶಸ್ಸು ಕಂಡಿದ್ದರೂ, ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಧೂಮಪಾನದಿಂದ ಆಗುವ ತೀವ್ರ ಪರಿಣಾಮ ಮುಂದುವರೆದಿದೆ. ಕಠಿಣ ತಂಬಾಕು ನಿಯಂತ್ರಣ ನೀತಿಗಳ ಮೂಲಕ ಲಕ್ಷಾಂತರ ಜನರ ಜೀವವನ್ನು ಉಳಿಸಬಹುದು ಮಾತ್ರವಲ್ಲದೆ, ಧೂಮಪಾನ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಹೇರುತ್ತಿರುವ ಈ ಭಾರಿ ಹೊರೆಯನ್ನು ತಗ್ಗಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆರವುಗೊಳಿಸಲು ಕೋಟ್ಪಾ ಕಾಯ್ದೆಯನ್ನು ಬಲಪಡಿಸಿ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಲಕ್ಷಾಂತರ ಭಾರತೀಯರನ್ನು ತಂಬಾಕು ತ್ಯಜಿಸುವಂತೆ ಮತ್ತು ಯುವಜನರು ತಂಬಾಕು ಬಳಕೆಯನ್ನು ಆರಂಭಿಸದಂತೆ ಉತ್ತೇಜಿಸಬಹುದಾಗಿದೆ ಎನ್ನುತ್ತಾರೆ ತಂಬಾಕು ಮುಕ್ತ ಕರ್ನಾಟಕ ವೇದಿಕೆಯ (Consortium for Tobacco Free Karnataka - CFTFK) ಸಂಚಾಲಕರಾದ ಶ್ರೀ ಎಸ್ ಜೆ ಚಂದರ್.

              “ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವಿಕೆ ಭಾರತದ ಆರೋಗ್ಯ ವ್ಯವಸ್ಥೆ ಮತ್ತು ಧೂಮಪಾನ ಮಾಡದವರ ಮೇಲೆ ಬೀರುತ್ತಿರುವ ಗಂಭೀರ ಆರ್ಥಿಕ ಪರಿಣಾಮವನ್ನು ಈ ಅಧ್ಯಯನ ಬಹಿರಂಗಗೊಳಿಸಿದೆ. ಸಾಮಾನ್ಯವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರೇ, ಅಂದರೆ ಮಹಿಳೆಯರು, ಯುವಜನರು ಮತ್ತು ಕಡಿಮೆ ಆದಾಯ ಉಳ್ಳವರೇ ಇದರ ಪರಿಣಾಮ ಎದುರಿಸುವುದು. ಹೊಗೆ ಮುಕ್ತ ವಾತಾವರಣ ಆರೋಗ್ಯದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಹೊಗೆ ಮುಕ್ತ ವಾತಾವರಣ ನಿರ್ಮಿಸುವ ಜವಾಬ್ದಾರಿ ಮತ್ತು ಹೊಣೆಯನ್ನು ಎಲ್ಲ ಭಾಗಿದಾರರು, ವಿಶೇಷವಾಗಿ ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ಮಾಲೀಕರು ಹೊರಬೇಕು,” ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್ ಹೇಳಿದ್ದಾರೆ.

             “ದೇಶದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಧೂಮಪಾನಿಗಳನ್ನು ಕಡಿಮೆ ಮಾಡಲು ಮತ್ತು ತಂಬಾಕು ಸಂಬಂಧಿ ಖಾಯಿಲೆಗಳ ಚಿಕಿತ್ಸೆಯಿಂದ ಆಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಭಾರತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತಂಬಾಕು ತೆರಿಗೆ ಹೆಚ್ಚಳ ಧೂಮಪಾನವನ್ನು ತಗ್ಗಿಸಲು ಇರುವ ಅತ್ಯಂತ ಪರಿಣಾಮಕಾರಿ ಅಸ್ತ್ರ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಗಮನಾರ್ಹ ಏರಿಕೆಯಾಗಿಲ್ಲ. ಎಲ್ಲ ವಿಧಗಳ ತಂಬಾಕು ಉತ್ಪನ್ನಗಳಿಂದ ಪ್ರಸ್ತುತ ಸಂಗ್ರಹವಾಗುತ್ತಿರುವ ತೆರಿಗೆಯನ್ನು ಒಟ್ಟು ಮಾಡಿದರೂ, ಅದು ಧೂಮಪಾನದ ಹೊಗೆಗೆ ಒಡ್ಡುಕೊಳ್ಳುವಿಕೆಯಿಂದ ಆಗುತ್ತಿರುವ 567 ಬಿಲಿಯನ್ ರೂಪಾಯಿ ಆರೋಗ್ಯ ವೆಚ್ಚಕ್ಕಿಂತ ಕಡಿಮೆಯಾಗಿದೆ,” ಎಂದು ಅರ್ಥಶಾಸ್ತ್ರಜ್ಞ ಮತ್ತು ಅಧ್ಯಯನದ ಲೇಖಕ ಡಾ. ರಿಜೋ ಎಂ. ಜಾನ್ ಅಭಿಪ್ರಾಯಪಡುತ್ತಾರೆ.

               ಅತ್ಯಧಿಕ ಸಂಖ್ಯೆಯ ಧೂಮಪಾನಿಗಳು ಮತ್ತು ರೆಸ್ಟೋರೆಂಟ್, ಬಾರ್, ಹೋಟೆಲ್ ಮತ್ತು ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶ ಸ್ಥಾಪಿಸಲು ಅವಕಾಶ ನೀಡುವ ದೇಶದ ಸಡಿಲ ಕಾನೂನುಗಳಿಂದ ಭಾರತದಲ್ಲಿ ಧೂಮಪಾನದ ಹೊಗೆಗೆ ಒಡ್ಡುಕೊಳ್ಳುವಿಕೆ ಆಘಾತಕಾರಿ ಪ್ರಮಾಣದಲ್ಲಿ ಮುಂದುವರೆದಿದೆ, ಎಂದು ಡಾ. ಜಾನ್ ಆತಂಕ ವ್ಯಕಪಡಿಸುತ್ತಾರೆ.

              ಧೂಮಪಾನದ ಹೊಗೆಗೆ ಒಡ್ಡುಕೊಳ್ಳುವಿಕೆಯಿಂದ ಆಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳಿಂದ ಧೂಮಪಾನ ಮಾಡದವರನ್ನು ರಕ್ಷಿಸಲು ಭಾರತ ತನ್ನ ಕಾನೂನುಗಳನ್ನು ಬಲಪಡಿಸಬೇಕೆಂದು ಈ ತಜ್ಞರು ಸಲಹೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries