HEALTH TIPS

ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಗೆ ಬೇಡಿಕೆ; ರಷ್ಯಾದಿಂದ ದಾಖಲೆಯ ಬೆಲೆಗೆ ಖರೀದಿ

             ಮುಂಬೈ: ಉಕ್ರೇನ್‌ನಿಂದ ಖಾದ್ಯ ತೈಲದ ಪೂರೈಕೆ ನಿಂತಿರುವುದರಿಂದ ದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡುಗೆಗೆ ಬಳಕೆಯಾಗುವ ತೈಲ ದರ ಏರಿಕೆಯಾಗಿದೆ. ಈಗ ಭಾರತವು ರಷ್ಯಾದಿಂದ 45,000 ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಅತ್ಯಧಿಕ ಬೆಲೆಗೆ ಖರೀದಿಸಿರುವುದಾಗಿ ವರದಿಯಾಗಿದೆ.

          ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಅಲ್ಲಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಸ್ಥಗಿತಗೊಂಡಿದೆ. ಭಾರತ ಹೊರ ದೇಶಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿದೆ. ತಾಳೆ ಎಣ್ಣೆ ಪೂರೈಕೆಯ ಮೇಲೆ ಇಂಡೊನೇಷ್ಯಾ ಮಿತಿ ಹೇರಿದೆ ಹಾಗೂ ದಕ್ಷಿಣ ಅಮೆರಿಕದಲ್ಲಿ ಸೋಯಾಬಿನ್‌ ಬೆಳೆ ಇಳುವರಿ ಕಡಿಮೆಯಾಗಿರುವುದು ದೇಶದಲ್ಲಿ ಸಸ್ಯ ಮೂಲದ ತೈಲಗಳ ಲಭ್ಯತೆಯಲ್ಲಿ ಕೊರತೆ ಸೃಷ್ಟಿಸಿಯಾಗಿದೆ.


        ಉಕ್ರೇನ್‌ನಿಂದ ಅಡುಗೆ ಎಣ್ಣೆ ರವಾನಿಸುವುದು ಸಾಧ್ಯವಾಗದಿರುವ ಕಾರಣದಿಂದಾಗಿ ಖರೀದಿದಾರರು ರಷ್ಯಾದಿಂದ ತೈಲ ಖರೀದಿ ವ್ಯವಹಾರ ನಡೆಸುತ್ತಿರುವುದಾಗಿ ಜೆಮಿನಿ ಎಡಿಬಲ್ಸ್ ಅಂಡ್‌ ಫ್ಯಾಟ್ಸ್‌ ಇಂಡಿಯಾ ಪ್ರೈ.ಲಿ.,ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಚೌಧರಿ ಹೇಳಿದ್ದಾರೆ. ಜೆಮಿನಿ ಸಂಸ್ಥೆಯು ಏಪ್ರಿಲ್‌ನಲ್ಲಿ ರಷ್ಯಾದಿಂದ 12,000 ಟನ್‌ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.

            ರಿಫೈನರಿಗಳು ಸೂರ್ಯಕಾಂತಿ ಕಚ್ಚಾ ತೈಲವನ್ನು ಪ್ರತಿ ಟನ್‌ಗೆ 2,150 ಡಾಲರ್‌ (₹1.63 ಲಕ್ಷ) ದಾಖಲೆಯ ಬೆಲೆಗೆ ಖರೀದಿಸಿವೆ. ಅದು ತೈಲ ಬೆಲೆ, ಇನ್ಶ್ಯುರೆನ್ಸ್‌ ಹಾಗೂ ಸರಕು ಸಾಗಣೆ ವೆಚ್ಚವನ್ನು (ಸಿಐಎಫ್‌) ಒಳಗೊಂಡಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿಗೂ ಮುನ್ನ ಪ್ರತಿ ಟನ್‌ ಸೂರ್ಯಕಾಂತಿ ಕಚ್ಚಾ ತೈಲವನ್ನು 1,630 ಡಾಲರ್‌ಗಳಿಗೆ (₹1.23 ಲಕ್ಷ) ಖರೀದಿಸಲಾಗುತ್ತಿತ್ತು ಎಂದು ಡೀಲರ್‌ಗಳು ಹೇಳಿದ್ದಾರೆ.

             ಉಕ್ರೇನ್‌-ರಷ್ಯಾ ಸಂಘರ್ಷಕ್ಕೂ ಮುನ್ನ ತಾಳೆ ಎಣ್ಣೆ ಮತ್ತು ಸೋಯಾಬಿನ್‌ ಎಣ್ಣೆಗಿಂತಲೂ ಕಡಿಮೆ ಬೆಲೆಗೆ ಸೂರ್ಯಕಾಂತಿ ಎಣ್ಣೆ ದೊರೆಯುತ್ತಿತ್ತು. ಆದರೆ, ಸೂರ್ಯಕಾಂತಿ ಎಣ್ಣೆಯ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ಉಕ್ರೇನ್‌ನಿಂದ ಪೂರೈಕೆ ಸ್ಥಗಿತವಾಗಿರುವುದರಿಂದ ರಿಫೈನರಿಗಳು ದೊಡ್ಡ ಮೊತ್ತ ತೆರಬೇಕಾಗಿದೆ ಎಂದು ಚೌಧರಿ ಹೇಳಿದ್ದಾರೆ.

          ಜಗತ್ತಿನಾದ್ಯಂತ ಉತ್ಪಾದನೆಯಾಗುವ ಶೇಕಡ 60ರಷ್ಟು ಸೂರ್ಯಕಾಂತಿ ಎಣ್ಣೆ ಹಾಗೂ ಒಟ್ಟು ರಫ್ತು ಪ್ರಮಾಣದಲ್ಲಿ ಶೇಕಡ 76ರಷ್ಟು ಯುರೋಪ್‌ ಮತ್ತು ಏಷ್ಯಾ ನಡುವಿನ ಕಪ್ಪು ಸಮುದ್ರದ ಮಾರ್ಗದಲ್ಲಿ ರವಾನೆಯಾಗುತ್ತದೆ.

             ಹಡಗುಗಳ ಮೂಲಕ ಉಕ್ರೇನ್‌ನಿಂದ ಭಾರತಕ್ಕೆ ತಲುಪಬೇಕಿದ್ದ 3,00,000 ಟನ್‌ಗೂ ಹೆಚ್ಚಿನ ಪ್ರಮಾಣದ ಸೂರ್ಯಕಾಂತಿ ಎಣ್ಣೆ ಸಾಗಣೆಗೆ ಅಡ್ಡಿಯಾಗಿದೆ. ಈಗ ಭಾರತದ ಖರೀದಿದಾರರು ರಷ್ಯಾಗೆ ಡಾಲರ್‌ಗಳ ರೂಪದಲ್ಲಿ ಪಾವತಿಸುತ್ತಿದ್ದಾರೆ ಹಾಗೂ ಸರಕು ಸಾಗಣೆ ಮಾಡುವ ಹಡಗುಗಳಿಗೆ ದೇಶದ ವಿಮಾ ಕಂಪನಿಗಳು ವಿಮೆ ನೀಡುತ್ತಿವೆ.

                ದೇಶದಲ್ಲಿ ಸುಮಾರು 2 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತಿದ್ದು, ರಿಫೈನರಿಗಳು ಪ್ರಸ್ತುತ 80,000 ಟನ್‌ಗಳಷ್ಟು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ದೆಹಲಿ ಮೂಲದ ವಿತರಕರೊಬ್ಬರು ಹೇಳಿದ್ದಾರೆ.

             ಸೂರ್ಯಕಾಂತಿ ಎಣ್ಣೆಯ ಕೊರತೆಯಿಂದಾಗಿ ಜನರು ಸೋಯಾ, ಕಡಲೆಕಾಯಿ ಎಣ್ಣೆ ಹಾಗೂ ಸಾಸಿವೆ ಎಣ್ಣೆ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು:

* ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ
* ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ
* ಸೋಯಾಬಿನ್‌ ಎಣ್ಣೆ: ಅರ್ಜೆಂಟಿನಾ, ಬ್ರೆಜಿಲ್‌


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries