ತಿರುವನಂತಪುರ: ಮಾಧ್ಯಮ ವರದಿಗಳ ಆಧಾರದಲ್ಲಿ ಪೋಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಂತೆ ಡಿಜಿಪಿ ಅನಿಲ್ ಕಾಂತ್ ಸೂಚಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದರೂ ಮಾಧ್ಯಮಗಳ ವರದಿ ಆಧರಿಸಿ ಹಲವು ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಇದನ್ನು ಪುನರಾವರ್ತಿಸಬೇಡಿ ಎಂದು ಅನಿಲ್ ಕಾಂತ್ ಸಲಹೆ ನೀಡಿರುವರು.
ಸುದ್ದಿ ಆಧಾರದಲ್ಲಿ ಕೈಗೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಮರುಕಳಿಸದಂತೆ ಎಲ್ಲಾ ಘಟಕಗಳ ಮುಖ್ಯಸ್ಥರು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಸೂಚಿಸಿದರು. ಶನಿವಾರ ನಡೆದ ಪೋಲೀಸ್ ಸ್ಟಾಫ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಅಪರಾಧ ವಿಭಾಗ, ವಿಜಿಲೆನ್ಸ್, ವಿಶೇಷ ವಿಭಾಗ, ಬೆಟಾಲಿಯನ್ ಮತ್ತು ರೇಂಜ್ ಐಜಿಗಳಿಗೆ ಈ ಸೂಚನೆಗಳನ್ನು ನೀಡಿದ್ದಾರೆ.




