HEALTH TIPS

ಕಚ್ಚಾತೈಲದ ಬಳಿಕ ಬಂಗಾರವೂ ದುಬಾರಿ

             ಬೆಂಗಳೂರು: ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಬಂಗಾರದ ಮೇಲೂ ಪರಿಣಾಮ ಬೀರಿದೆ. ಪ್ರತಿ ಗ್ರಾಂ ಚಿನ್ನದ ಬೆಲೆ ಅಂದಾಜು 200 ರಿಂದ 300 ರೂ. ದರ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 4,730 ರೂ, 24 ಕ್ಯಾರೆಟ್ ಅಪರಂಜಿ ಚಿನ್ನದ ಪ್ರತಿ ಗ್ರಾಂಗೆ 5,141 ರೂ. ಹಾಗೂ ಪ್ರತಿ ಕೆಜಿ ಬೆಳ್ಳಿಗೆ 69,200 ರೂ. ಇದೆ. ಅಮೆರಿಕ ಸೇರಿ ವಿಶ್ವದ ಇನ್ನಿತರ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂದನ ಹೇರಿವೆ ಹಾಗೂ ರಷ್ಯಾದ ಕರೆನ್ಸಿಗಳ ಚಲಾವಣೆಯನ್ನು ನಿಷೇಧಿಸಿವೆ.

ಅಡುಗೆ ಎಣ್ಣೆ ಏರಿಕೆ: ರಷ್ಯಾ -ಯೂಕ್ರೇನ್ ಯುದ್ಧ ಕಾರಣ ಗೋಧಿ ಮತ್ತು ಸೂರ್ಯಕಾಂತಿ ಎಣ್ಣೆ ಬೆಲೆ ಏರಿಕೆ ಆಗಿದೆ. ಇದಲ್ಲದೆ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಆಗಿದ್ದು, ಹಣದುಬ್ಬರ ಹೆಚ್ಚಾಗುವ ಲಕ್ಷಣಗಳು ಗೋಚರಿಸಿವೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತವಾಗಿದೆ. ಹಣವುಳ್ಳವರು ಭವಿಷ್ಯದ ಸುರಕ್ಷತೆಗಾಗಿ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಗಮನಹರಿಸಿದ್ದಾರೆ. ಹೆಚ್ಚಾಗಿ ಬಂಡವಾಳ ಹೂಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ರಷ್ಯಾ ಮತ್ತು ಯೂಕ್ರೇನ್ ಚಿನ್ನ ಉತ್ಪಾದಿಸುವ ದೇಶಗಳಲ್ಲ. ಭಾರತದ ಕಂಪನಿಗಳು ಈಗಾಗಲೇ ಹೆಚ್ಚಾಗಿ ಚಿನ್ನ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿವೆ. ಮಾರುಕಟ್ಟೆಯಲ್ಲಿ ಸಂಗ್ರಹಿಸಿರುವ ಈ ಎಲ್ಲ ಚಿನ್ನಗಳು ಖಾಲಿಯಾದರೆ ಮಾತ್ರ ಅದರ ಪ್ರಭಾವ ಗೊತ್ತಾಗಲಿದೆ. ಯುದ್ಧದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಣಾಮ ಬೀರಿರುವುದು ನಿಜ. ಆದರೆ, ಸ್ವಲ್ಪ ದಿನಗಳ ಬಳಿಕ ಎಲ್ಲ ಸರಿಯಾಗಲಿದೆ ಎನ್ನುತ್ತಾರೆ ತಜ್ಞರು.

            ಕಚ್ಚಾತೈಲ ಏರಿಕೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡ 2.75 ಏರಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 116.03 ಡಾಲರ್ ತಲುಪಿದೆ. ರಷ್ಯಾ ಮೇಲೆ ಅಮೆರಿಕ ನಿರ್ಬಂಧ ಕಾರಣದಿಂದಾಗಿ ಅಮೆರಿಕ ಕ್ರೂಡ್ ಸ್ಟಾಕ್ ಇಳಿಕೆ ಆಗಿವೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್​ನಲ್ಲಿ ಪ್ರತಿ ಬ್ಯಾರೆಲ್ ಬೆಲೆ 119.84 ಡಾಲರ್​ಗೆ ಏರಿದೆ. ಇದು 2012ರ ಮೇ ತಿಂಗಳಿಂದೀಚೆಗೆ ಗರಿಷ್ಠ ಮಟ್ಟದ ದರವಾಗಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೇಟ್ ಕ್ರೂಡ್ ಬೆಲೆ 116.57 ಡಾಲರ್ ತಲುಪಿದೆ. ಇದು 2008ರ ಸೆಪ್ಟೆಂಬರ್ ನಂತರದ ಗರಿಷ್ಠ ಮಟ್ಟವಾಗಿದೆ.

           ಉತ್ಪಾದನೆ ಏರಿಕೆ ಇಲ್ಲ: ಏಪ್ರಿಲ್​ನಲ್ಲಿ ಈ ಹಿಂದೆಯೇ ನಿಗದಿಪಡಿಸಿದಂತೆ ನಿತ್ಯವೂ 4 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಮುಂದುವರಿಸಲಾಗುವುದು. ಇದನ್ನು ಮತ್ತೆ ಏರಿಸುವ ಪ್ರಶ್ನೆ ಇಲ್ಲ ಎಂದು ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ಸ್ಪಷ್ಟಪಡಿಸಿವೆ.

             ಸೆನ್ಸೆಕ್ಸ್, ನಿಫ್ಟಿ ಕುಸಿತ: ಬಿಎಸ್​ಇ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ 527.72 ಅಂಶ ಏರಿತ್ತಾದರೂ, ಕೊನೆಗೆ 366.62 ಅಂಶ (0.66%) ಕುಸಿದು 55,996.62 ಅಂಶ ತಲುಪಿದೆ. ಇದೇ ರೀತಿ ನಿಫ್ಟಿ ಕೂಡ 107.90 ಅಂಶ (0.65%) ಕುಸಿದು 16,498.05 ಅಂಶದಲ್ಲಿ ವಹಿವಾಟು ಮುಗಿಸಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 16 ಪೈಸೆ ಇಳಿದು 75.96 ರೂಪಾಯಿ ತಲುಪಿದೆ.

ಖಾದ್ಯ ತೈಲ ಬೆಲೆ ಎಷ್ಟು ಏರಿಕೆ?: ಜನವರಿ ತಿಂಗಳಲ್ಲಿ ಪಾಮ್ ಆಯಿಲ್ 10 ಲೀಟರ್ ಬಾಕ್ಸ್​ಗೆ 1162 ರೂ., ಸೂರ್ಯಕಾಂತಿ 10 ಲೀ. ಬಾಕ್ಸ್​ಗೆ 1335 ರೂ., ವನಸ್ಪತಿ 10.ಲೀ. ಬಾಕ್ಸ್​ಗೆ 1130 ರೂ., ಅಡುಗೆ ಎಣ್ಣೆ 1230 ರೂ. ಹಾಗೂ ದೀಪದ ಎಣ್ಣೆ 1250 ರೂ. ಇತ್ತು. ಆದರೀಗ ಪಾಮ್ ಆಯಿಲ್ 10 ಲೀ. ಬಾಕ್ಸ್​ಗೆ 1560 ರೂ.ಗೆ ಏರಿಕೆಯಾಗಿದೆ. ಉಳಿದಂತೆ ಸೂರ್ಯಕಾಂತಿ 10 ಲೀ. ಬಾಕ್ಸ್​ಗೆ 1610 ರೂ., ವನಸ್ಪತಿ 10.ಲೀ. ಬಾಕ್ಸ್​ಗೆ 1550 ರೂ. ಅಡುಗೆ ಎಣ್ಣೆ 1540 ರೂ. ಹಾಗೂ ದೀಪದ ಎಣ್ಣೆ 1590 ರೂ.ಗೆ ಹೆಚ್ಚಳವಾಗಿದೆ.

               

           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries