HEALTH TIPS

ರುದ್ರಾಭಿಷೇಕ

 ಪರಮೇಶ್ವರನ ಅನುಗ್ರಹಕ್ಕಾಗಿ, ತಮ್ಮ ದಿನನಿತ್ಯದ ಪೂಜಾವಿಧಿಗಳಲ್ಲಿ, ಸಾಂಪ್ರದಾಯಿಕ ಶಿವಭಕ್ತರು ಹಾಗೂ ಪರಶಿವನ ಆರಾಧಕರು ರುದ್ರ ಮಹಾಮಂತ್ರಗಳನ್ನು ಸ್ವರಸಮೇತ ಉಚ್ಛರಿಸುತ್ತ, ಶಿವಲಿಂಗಕ್ಕೆ ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಫಲೋದಕ, ನಂತರ ಶುದ್ಧೋದಕದಿಂದ ಆಭಿಷೇಕ ಮಾಡುವದುಂಟು. ಅಲ್ಲದೆ, ಶಿವನ ಕುಟುಂಬದ ಇನ್ನಿತರರುಗಳಾದ ಗೌರೀ, ಗಣೇಶ ಮತ್ತು ಸುಬ್ರಹ್ಮಣ್ಯೇಶ್ವರಸ್ವಾಮಿಯ ಪೂಜೆ ಯಾ ವ್ರತಗಳಲ್ಲೂ ರುದ್ರಾರ್ಚನೆ ಮಾಡುವ ಸಂಪ್ರದಾಯವಿದೆ. ಈ ದೇವರುಗಳ ಪ್ರತಿಷ್ಠಾಪನೆಯಾಗಿರುವ ದೇವಸ್ಥಾನಗಳಲ್ಲೂ ಕೂಡ, ರುದ್ರಾರ್ಚನೆಯು ಪೂಜೆಯ ಒಂದು ಮುಖ್ಯ ಆಂಗವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೆ. ಹಾಗಾದರೆ, ಕೇಳಲು ಇಂಪಾಗಿ, ಭಕ್ತಿರಸವನ್ನು ಉಕ್ಕಿಸುವ ಈ ಮಂತ್ರಗಳ ಮಹತ್ವವೆಂತಹುದು ಮತ್ತು ಸಂಸ್ಕೃತ ಭಾಷೆಯಲ್ಲಿರುವ ಈ ಮಂತ್ರಗಳ ಭಾವಾರ್ಥವೇನಿರಬಹುದು? ಈ ದಿಶೆಯಲ್ಲಿ, ಭಕ್ತಜನ ಸಾಮಾನ್ಯರಿಗೆ ಅರ್ಥೈಸುವ ಸಲುವಾಗಿ ಮಾಡಿರುವ ಈ ಪ್ರಯತ್ನ ಸಫಲವಾಗುವುದೆಂಬುದೇ ನಮ್ಮ ಆಶಯ.

‘ರುದ್ರಾಧ್ಯಾಯ’ದ ಉಗಮ : ‘ರುದ್ರಾಧ್ಯಾಯ’ವು ಯಜುರ್ವೇದ ಸಂಹಿತೆಯ ಒಂದು ಅಂಗ. ಅದರ ಉಗಮಕ್ಕೆ ವೇದಗಳೇ ಕಾರಣ. ವೇದಗಳು ಹಾಗು ಉಪನಿಷತ್ತುಗಳು ‘ಅಪೌರುಷೇಯ’(ಅಂದರೆ ಮಾನವರಿಗೆ ದುಃಸಾಧ್ಯವಾದುವು)ವೆಂದು ಕರೆಯಲ್ಪಟ್ಟಿವೆ. ಬ್ರಹ್ಮನೇ ಇವುಗಳಿಗೆ ಮೂಲ; ಹಾಗೂ ಮಾನವರ, ತಮ್ಮ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ, ಮನೋಬಲ ಹಾಗೂ ಜ್ಞಾನವೃದ್ಧಿಗೋಸ್ಕರವೇ ಆತನಿಂದ ಸೃಷ್ಟಿಸಲ್ಪಟ್ಟಿತೆಂದೂ ಧರ್ಮಗ್ರಂಥಗಲ್ಲಿ ಉಕ್ತವಾಗಿರುತ್ತವೆ. ಇವುಗಳು ಪಾಪನಿರ್ಮುಕ್ತರೂ, ಮಹಾತಪಸ್ವಿಗಳೂ ಆದಂತಹ ಋಷಿಗಳಿಗೆ, ಪ್ರಥಮತಃ ಛಂದೋಬದ್ಧವಾಗಿ ಹೇಳಲ್ಪಟ್ಟು, ನಂತರ ಈ ತಪಸ್ವಿಗಳು ಒಬ್ಬರಿಂದ ಮತ್ತೊಬ್ಬರಿಗೆ ಬಾಯಿಂದ ಕಿವಿಯ ಮೂಲಕ ಪ್ರಸರಣ ಮಾಡುತ್ತಾಹೋದರು. ಹೀಗೆ ವೇದಮಂತ್ರಗಳು ‘ಶೃತಿ’ ಎಂತಲೂ, ‘ಆಗಮ’ ಎಂತಲೂ, ‘ಅಮ್ನಾಯ’ ಹಾಗೂ ‘ನಿಗಮ’ಗಳೆಂತಲೂ ವಿವಿಧ ಹೆಸರುಗಳಲ್ಲಿ ಪ್ರಚುರಗೊಂಡವು. ಈ ಅಪಾರ ವೇದ ಸಂಪತ್ತನ್ನು ಪರಿಶೋಧಿಸಿ, ‘ಋಕ್‌, ಯಜುರ್‌, ಅಥರ್‌ ಮತ್ತು ಸಾಮವೇದ’ಗಳೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ ಕೀರ್ತಿ, ಪ್ರಪ್ರಥಮವಾಗಿ ಭಗವನ್‌ ಶ್ರೀ ವೇದವ್ಯಾಸರಿಗೆ ಸಲ್ಲುತ್ತದೆ. ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥೈಸಲು, ಯಜ್ಞಯಾಗಾದಿಗಳಿಗೆ ಸಂಬಂಧಿಸಿದ ಯಜುರ್ವೇದವನ್ನು ‘ಬ್ರಾಹ್ಮಣ, ಸಂಹಿತೆ, ಅರಣ್ಯಕ ಹಾಗೂ ಉಪನಿಷದ್ವಾಗ್ಮಯ’ಗಳೆಂದು ವಿಭಜಿಸಿ, ಯಜುರ್ವೇದ ‘ಸಂಹಿತೆಯನ್ನು’ ಪುನಃ ‘ಕಾಠಕ, ಕಪಿಷ್ಠಲ, ಮೈತ್ರಾಯಣೀ ಹಾಗೂ ತೈತ್ತರೀಯ’ವೆಂಬ ನಾಲ್ಕು ಉಪಶಾಖೆಗಳಾಗಿ ಪ್ರತ್ಯೇಕಿಸಿದರು. ಹೀಗೆ ಬೇರ್ಪಟ್ಟ, ಕೃಷ್ಣ ಯಜುರ್ವೇದ ತೈತ್ತರೀಯ ಸಂಹಿತೆಯ ಚತುರ್ಥ (ವೈಶ್ವ ದೇವಂ ಕಾಂಡಮ್‌) ಕಾಂಡದ ಪಂಚಮ ಪ್ರಪಾಠಕ (ಅಧ್ಯಾಯ)ವೇ ‘ರುದ್ರಾಧ್ಯಾಯ’ ಅಥವಾ ‘ರುದ್ರಪ್ರಶ್ನ’ವೆಂದು ಪ್ರಸಿದ್ಧಿಯಾಗಿ, ಶಿವಭಕ್ತರ ನಿತ್ಯದೇವತಾರ್ಚನೆಯ ಒಂದು ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿದೆ.

‘ರುದ್ರಪ್ರಶ್ನ’ವು ‘ಓಂ ನಮೋ ಭಗವತೇ ರುದ್ರಾಯ, ಓಂ ನಮಸ್ತೇರುದ್ರಮನ್ಯವ ಉತೋತ ಇಷವೇ ನಮಃ’ ಎಂಬಲ್ಲಿಂದ ಪ್ರಾರಂಭವಾಗಿ, ‘ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂವೋ ಜಂಭೇ ದಧಾಮಿ’ ಎಂಬ ಪ್ರಾರ್ಥನೆಯಲ್ಲಿ ಕೊನೆಗೊಳ್ಳುತ್ತದೆ. ಇದಿಷ್ಟು ‘ನಮಕ’ ಭಾಗವಾಗಿ, ‘ರುದ್ರ’ ರೂಪನಾದ ಪರಶಿವನನ್ನು ಹಾಡಿ, ಹೊಗಳಿದರೆ, ಇದೇ ವೈಶ್ವದೇವಂ ಕಾಂಡದ ಸಪ್ತಮ ಪ್ರಪಾಠಕವು ‘ಚಮಕ’ವೆಂದು ಕರೆಯಲ್ಪಟ್ಟು, ನಾನಾರೀತಿಯಲ್ಲಿ ನಮ್ಮ ಇಚ್ಛಾನಿಚ್ಛೆಗಳನ್ನು ಪರಮೇಶ್ವರನಲ್ಲಿ ಪ್ರಾರ್ಥಿಸಿಕೊಳ್ಳುವದಾಗಿದೆ.



‘ರುದ್ರಾಧ್ಯಾಯ’ ಮಂತ್ರಗಳನ್ನು ಒಳಹೊಕ್ಕು ಪರಿಶೀಲಿಸಿದಾಗ : ರುದ್ರಪ್ರಶ್ನೆಯ ಮೊದಲನೇ ಅನುವಾಕ್ಕು(ದ್ವಿಪದಿ ಯಾ ಚತುಷ್ಪದಿ)ಎಲೈ ಗಿರಿಶಂತನೇ (ಕೈಲಾಸದಲ್ಲಿದ್ದು, ಸುಖವನ್ನು ಕೊಡುವವನು ಗಿರಿಶಂತ), ನಿನ್ನ ಉಗ್ರವಾದ ಕೋಪಕ್ಕೂ, ಕಠೋರವಾದ ಬಿಲ್ಲುಬಾಣಗಳಿಗೂ ಮತ್ತು ಅವುಗಳನ್ನು ಧರಿಸಿರುವ ನಿನ್ನ ಬಾಹುಗಳಿಗೂ ನಮಸ್ಕಾರವು. (ಪ್ರಮುಂಚ ಧನ್ವನಸ್ತ್ವಮುಭಯೋರಾರ್ತ್ನಿಯೋರ್ಜ್ಯಾಮ್‌, ಯಾಶ್ಚ ತೇ ಹಸ್ತ ಇಷವಃ ಪರಾತಾ ಭಗವೋ ವಪ -----ಅಸ್ಮನ್ನಿದೇಹಿತಮ್‌). ಕೋಪವನ್ನು ಶಮನಗೊಳಿಸಿ, ಆ ಬಾಣಗಳನ್ನು ದುಷ್ಟರನ್ನಷ್ಟೆ ಶಿಕ್ಷಿಸಲು ಉಪಯೋಗಿಸಿ, ಸಜ್ಜನರನ್ನು, ಈ ಲೋಕವನ್ನು ರಕ್ಷಿಸು ಎಂದಿತ್ಯಾದಿಯಾಗಿ ಕೇಳಿಕೊಳ್ಳುವುದಾಗಿದೆ. ಎರಡನೆ ಅನುವಾಕ್ಕಿನಲ್ಲಿ, ದೇವತೆಗಳನ್ನು, ಈಶಾನ್ಯ ದಿಕ್ಕನ್ನು, ಪಶುಪಕ್ಷಿಗಳನ್ನು ರಕ್ಷಿಸಿ, ಕ್ಷೇತ್ರಪಾಲ, ಅರಣ್ಯರಕ್ಷಕ, ದಿಕ್ಪತಿ ಹಾಗೂ ಧರ್ಮಪಾಲನೆಂಬಿತ್ಯಾದಿಯಾಗಿ ಕರೆಯಲ್ಪಟ್ಟಿದ್ದಾನೆ (ನಮೋ ಹಿರಣ್ಯಬಾಹವೇ, ಸೆನಾನ್ಯೇ ದಿಶಾಂಚಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ ನಮಃ --ಧಾವತೆ ಸತ್ಪನಾಂಪತಯೇ ನಮಃ).

ಮೂರು ಹಾಗೂ ನಾಲ್ಕನೆ ಅನುವಾಕ್ಕಿನಲ್ಲಿ, ಈತನು ರೋಗನಿವಾರಕನೂ (ನಮಃ ಸಹಮಾನಾಯ ನಿವ್ಯಾಧಿನ ಅವ್ಯಾಧಿನೀನಾಂ ಪತಯೇ --ನಮೋ ನಮಃ ಅಶ್ಪಪತಿಭ್ಯಶ್ಚವೋ ನಮಃ), ಕಾಡಿನವಾಸಿಗಳನ್ನು, ಎಲ್ಲರೀತಿಯ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಕಾಪಾಡುವವನೆಂದೂ, ಪಂಚಮದಲ್ಲಿ, ವಿವಿಧರೂಪಗಳಲ್ಲಿ ಕಾಣಿಸಿಕೊಳ್ಳುವವನೂ (ನಮೋ ಭವಾಯಚ, ರುದ್ರಾಯಚ, ನಮಃ ಶರ್ವಾಯಚ --ನಮಃ ಸ್ರೋತಸ್ಯಾಯಚ ದ್ವೀಪ್ಯಾಯಚ), ಸಪ್ತಮ ಅನುವಾಕ್ಕಿನಲ್ಲಿ ಈತನು ನಾದರೂಪಿಯೂ, ಭಕ್ತರ ಹಿತೈಷಿಯೂ, ಸ್ವಯಮಾಯುಧನೂ, ಮಳೆ ಕರೆಸುವವನೂ, ವಾಸಸ್ಥಳ ರಕ್ಷಕನೆಂಬುದಾಗಿಯೂ, ದಶಮದಲ್ಲಿ, ಅನುದಿನವೂ ನಮ್ಮನ್ನು ಕಾಡುವ ರೋಗರುಜಿನಗಳಿಗೆ ಔಷಧದಂತಿರುವ, ಜನನ ಮರಣಗಳ ಈ ಸಂಸಾರಬಂಧನವೆಂಬ ಮಹಾವ್ಯಾಧಿಯಿಂದ ಮುಕ್ತಿದೊರಕಿಸಿ ಕೊಡುವವನೆಂದೂ (ಯಾತೇರುದ್ರ ಶಿವಾ ತನೂಃ ಶಿವಾ ವಿಶ್ವಾಹ ಭೇಷಜೀ--), ಮತ್ತು ಹನ್ನೊಂದನೆಯ ಹಾಗೂ ಕಡೆಯ ಅನುವಾಕ್ಕಿನಲ್ಲಿ, ತ್ರಿಲೋಕಗಳ ಎಲ್ಲೆಡೆಗಳಲ್ಲಿಯೂ ಹರಡಿರುವ ಸಹಸ್ರಾರು ರುದ್ರರೂಪಗಳಲ್ಲಿ ಕಾಣಿಸಿಕೊಳ್ಳುವ ಈತನ ದೃಷ್ಟಿಗೆ ಗೋಚರಿಸುವಂತೆ ನಮ್ಮ ಎಲ್ಲಾ ಹತ್ತೂ ಬೆರಳುಗಳನ್ನು ಚಾಚುತ್ತಾ, ಎರಡೂ ಕೈಜೋಡಿಸಿ, ನಮಸ್ಕರಿಸುತ್ತೇವೆ (ಸಹಸ್ರಾಣಿ ಸಹಸ್ರಶೋ ಯೇ ರುದ್ರಾ ಅಧಿ ಭೂಮ್ಯಾಮ್‌ --ತಂ ವೋ ಜಂಭೇ ದಧಾಮಿ). ಈ ಬಹುರುದ್ರರೂಪಿ ಪರಮೇಶ್ವರನು ಕಂಟಕರನ್ನೆಲ್ಲ ನಾಶಪಡಿಸಿ, ನಮಗೆ ಸುಖವನ್ನು ತರಲಿ, ಎಂದು ಬಿನ್ನವಿಸಿಕೊಳ್ಳಲಾಗಿದೆ. ಇದಿಷ್ಟು ಪಂಚಮ ಅಧ್ಯಾಯವಾದರೆ, ಸಪ್ತಮ ಅಧ್ಯಾಯ (ಪ್ರಪಾಠಕಃ)ವು, ರುದ್ರನಲ್ಲಿ, ಈ ಲೋಕದ ಕ್ಷೇಮಾಭಿವೃದ್ಧಿಗೂ, ತಾನು, ತನ್ನ ಪರಿಸರ ಹಾಗೂ ತಮ್ಮವರೆಲ್ಲರ ಲೌಕಿಕ, ಪಾರಮಾರ್ಥಿಕ ಜೀವನದ ಅವಶ್ಯಕತೆಗಳ ಪೂರೈಕೆಗಾಗಿ ಆತನನ್ನು ವಿವಿಧಬಗೆಯಲ್ಲಿ ಕೋರುವ ಮಂತ್ರಗಳಾಗಿ ರೂಪಗೊಂಡಿದೆ.

‘ರುದ್ರಮಂತ್ರ’ಗಳ ಭಾವಾರ್ಥ : ಈ ಮಂತ್ರಗಳಲ್ಲಿ ರುದ್ರನೇ ಪ್ರತ್ಯಕ್ಷದೇವತೆ. ಈತನನ್ನು ಸ್ತುತಿಸುವ ಋಷಿಗಳೇ ‘ವಿಶ್ವೇದೇವಾಃ’ (ಓಂ ಇಡಾ ದೇವಹೂರ್ಮನುಯಜ್‌ ಜನೀ ಬೃಹಸ್ಪತಿರುಕ್ಥಾಮದಾನಿ ಶಗಂಸಿಷದ್ವಿಶ್ವೇ ದೇವಾಃ ಸೂಕ್ತವಾಚಃ ಶೋಭಾಯೈಃ ಪಿತರೋನುಮದಂತು). ಇವರುಗಳು ಪರಮದೈವಭಕ್ತರೂ, ರುದ್ರನಲ್ಲಿ ಅಪಾರ ನಂಬಿಕೆ ಉಳ್ಳವರೆಂದೂ ತಿಳಿದುಬರುತ್ತದೆ. ಋಗ್ವೇದದಲ್ಲಿ ‘ಉಷಸ್‌’ ದೇವತೆಗಳಿಗೆ ಪ್ರಾಧಾನ್ಯವಿದ್ದರೆ, ಇಲ್ಲಿ ‘ರುದ್ರ’ನಿಗೆ ಹೆಚ್ಚು ಒತ್ತು ಕೊಡಲಾಗಿದೆ. ಈತನು ಅಂತರಿಕ್ಷ ದೇವತಾಗಣಕ್ಕೆ ಸೇರಿದವನೂ, ವಿಶ್ವರೂಪಿಯೂ, ವಿರಾಡ್ಪುರುಷನೂ, ವಿವಿಧರೂಪಗಳಲ್ಲಿರ ತಕ್ಕವನೂ, ಚತುರನೂ, ಕೆರೆ, ನದಿ, ಸಾಗರ, ಭೂಮಿ, ಕಟ್ಟೆ, ಬೆಟ್ಟ, ವನ, ಮೃಗ, ಜಂತು, ಹಾಗೂ ಆಕಾಶ, ಹೀಗೆ ಎಲ್ಲವನ್ನು ಆವರಿಸಿರುವವನು ಎಂದು ವರ್ಣಿಸಲ್ಪಟ್ಟಿದ್ದಾನೆ. ‘ರುದ್ರ’ ಎಂದರೆ ಪ್ರಳಯಕಾಲದ ಭೀಭಿತ್ಸರೂಪವನ್ನು ತಾಳಿ, ಸಕಲ ಜೀವರಾಶಿಗಳಿಗೆ ಅತೀವ ದುಃಖಕಾರಕನು. ಆದರೆ ಶಾಂತನಾಗಿದ್ದು, ಒಲಿದಾಗ ಅಷ್ಟೇ ನಿರ್ವಿಘ್ನಕಾರಕನು, ಭಕ್ತರ ಎಲ್ಲಾ ಅಭೀಷ್ಟಗಳನ್ನು ನೆರವೇರಿಸಿ ಕೊಡುವವನು. ಆತನೆ ವಿಶ್ವಶಿಲ್ಪಿಯು, ವಿಶ್ವಕ್ಕೇ ಆಧಾರನೂ, ತ್ರಯಂಬಕನು, ಎಲ್ಲಾ ಚರಾಚರಗಳಿಗೆ ಒಡೆಯನು, ಆತನೇ ಇಂದ್ರನೂ, ಚಂದ್ರನು, ತೇಜೋಮಯನೂ, ಹಿರಣ್ಯಬಾಹುವು. ವಿರೋಧಿಗಳಿಗೆ ಎಷ್ಟು ಕ್ರೂರನೋ, ಒಲಿಸಿಕೊಂಡವರಿಗೆ ಅಷ್ಟೇ ಕಾರುಣ್ಯಮಯಿ. ರೋಗಕಾರಕನೂ ಈತನೇ, ಭೇಷಜ್ಯ (ವೈದ್ಯ)ನೂ ಅವನೆ. ಕಳ್ಳರು, ವಂಚಕರು, ದುಷ್ಟರು, ಕ್ಷುದ್ರರು, ರಾಜರು, ಸೈನಿಕರೂ, ಬೇಡರು, ವರ್ತಕರೂ, ಪಶುಗಳು - ಹೀಗೆ ಎಲ್ಲಾ ವರ್ಗಗಳಿಗೂ ತಂದೆಯ ಸ್ವರೂಪನು. ಆದರೆ, ದುಷ್ಟರನ್ನು, ವಂಚಕರನ್ನು ಉಗ್ರವಾಗಿ ಶಿಕ್ಷಿಸದೆ ಬಿಡನು. ಬಿಲ್ಲನ್ನು ಕೈಯಲ್ಲಿ ಧರಿಸಿ, ಬಾಣವನ್ನು ಅವರ ಮೇಲೆ ಬಿಡಲು ಸೆಟೆದು ನಿಂತಿರುವವನು(ಅಂದರೆ ದುಷ್ಟ ಶಿಕ್ಷಕ, ಶಿಷ್ಟಪಾಲಕ ಎಂಬರ್ಥ). ಸಮುದ್ರಮಥನ ಕಾಲದಲ್ಲಿ ಉಂಟಾದ ಕಾಲಕೂಟ ವಿಷವನ್ನು ಸ್ವತಃ ನುಂಗಿ, ದೇವದಾನವರನ್ನು ವಿನಾಶದ ಅಂಚಿನಿಂದ ಪಾರು ಮಾಡಿ, ‘ವಿಷಕಂಠ,ನೀಲಕಂಠ, ಹಾಗೂ ಶಿತಿಕಂಠ’ ಎಂದು ಹೆಸರಿಸಲ್ಪಟ್ಟ ವಾತ್ಸಲ್ಯಮಯಿ. ಈತನೇ ಶ್ರೇಷ್ಠನು, ಜ್ಯೇಷ್ಠನು, ಕನಿಷ್ಠನೂ, ಪಶುಪಕ್ಷಿಗಳಿಗಾಗಿ, ಪೈರುಗಳಿಗಾಗಿ ಮೇಘದಿಂದ ವರ್ಷವನ್ನು ಕುರಿಸುವವನು, ಇವನೇ ಶಿಶುರೂಪನೂ ಅಲ್ಲದೆ ದೈತ್ಯರೂಪನೂ. ಹೀಗೆ ಎಲ್ಲವೂ ಆ ರುದ್ರರೂಪಿಯಾದ ಪರಮಶಿವನೇ ಈತನು. ದೇವತೆಗಳಿಗೆ ಮಾತ್ರ ಕಾಣಿಸುವ, ಆದರೆ ಈತನನ್ನು ಪೂಜಿಸುವ ಮಾನವರಿಗೆ ಅಗೋಚರನಾಗಿದ್ದೂ, ಗುಪ್ತರೀತಿಯಲ್ಲಿ ಸರ್ವಕಾಲಕ್ಕೂ ಬೆಂಬಲಿಸುವವನು. ಭಕ್ತರನ್ನು ಮೃತ್ಯುಭಯದಿಂದ ಪಾರುಮಾಡುವವನು ಅಲ್ಲದೆ ಸಕಲ ಸೌಭಾಗ್ಯಗಳನ್ನು ಕೊಟ್ಟು ಆಶೀರ್ವದಿಸುವವನು.

‘ರುದ್ರಾಧ್ಯಾಯ’ ಮಂತ್ರಗಳ ಛಂದಸ್ಸಿನ ಬಗ್ಗೆ : ರುದ್ರಾಧ್ಯಾಯದ ಪಂಚಮ ಅಧ್ಯಾಯವು ಒಟ್ಟು ಹನ್ನೊಂದು ಅನುವಾಕ್ಕುಗಳಿಂದ ಕೂಡಿದ್ದು, ವಿಷ್ಣುಸಹಸ್ರನಾಮದಲ್ಲಿಯಂತೆ ‘ಅನುಷ್ಟುಪ್‌’ ಎಂಬ ಛಂದಸ್ಸಿನಲ್ಲಿ ರಚಿತವಾಗಿದೆ. ಪ್ರತಿ ಅನುವಾಕ್ಕಿನಲ್ಲಿಯೂ, ಪಾದಗಳ ಸಂಖ್ಯೆ ಹಾಗೂ ಪ್ರತಿಪಾದದ ವರ್ಣಗಳ ಸಂಖ್ಯೆಯಲ್ಲೂ ವೈವಿಧ್ಯತೆ ತೋರುಬರುತ್ತದೆ. ಪ್ರತಿಪಾದವೂ ನಮಃ ಎಂಬ ಶಬ್ದದಿಂದ ಪ್ರಾರಂಭವಾಗಿ ಇಲ್ಲವೇ ಮುಕ್ತಾಯಗೊಂಡು, ಉದ್ದಕ್ಕೂ ಈ ಶಬ್ಧ ಪುನಶ್ಚರಣೆಯಾಗುವುದರಿಂದ ಈ ಭಾಗವನ್ನು ‘ನಮಕ’ ವೆಂದು ಕರೆಯಲಾಗಿದೆ. ಸಪ್ತಮ ಅಧ್ಯಾಯವು ‘ಓಂ ಅಗ್ನಾವಿಷ್ಣೂಸಜೋಷಸೇಮಾವರ್ಧಂತುವಾಂಗಿರಃ ’ ಎಂಬಲ್ಲಿಂದ ಪ್ರಾರಂಭಿಸಿ ‘ಓಂ ಇಡಾದೇವಹೂರ್ಮನುಯಗ್ನನೀ ಪಿತರೋನುಮದಂತು ಎಂಬಲ್ಲಿಗೆ (ಅಂದರೆ ಈ ಮಂತ್ರಗಳನ್ನು ಪಠಿಸಿದವರಿಗೆ ಅಗ್ನಿ, ವಿಷ್ಣು, ದೇವತೆಗಳ ಅನುಗ್ರಹ ದೊರೆಯಲಿ, ಮತ್ತು ನಾವಾಚರಿಸುವ ಎಲ್ಲ ಸತ್ಕಾರ್ಯ, ವೇದಾಧ್ಯಯನ ಮುಂತಾದುವುಗಳಿಗೆ ರಕ್ಷಣೆ ದೊರೆಯಲಿ, ಅಲ್ಲದೆ ನಮ್ಮ ಅಂಗಾಂಗಗಳಿಗೆ ದ್ರುಢತೆಯನ್ನು ವಿಶ್ವೇದೇವತೆಗಳೂ, ಪಿತೃಗಳೂ ಆಶೀರ್ವದಿಸಲಿ)ಎಂಬಲ್ಲಿಗೆ ಮುಕ್ತಾಯವಾಗುತ್ತದೆ. ಇಲ್ಲಿ ಪ್ರತಿಪದಕ್ಕೂ ‘ಚ’ ಕಾರವನ್ನು ಸೇರಿಸಿ ಪಠಿಸುವುದರಿಂದ ಈ ಭಾಗವು ‘ಚಮಕ’ ವೆಂದು ಕರೆಯಲ್ಪಟ್ಟಿದೆ. ಚಮಕವು ಹನ್ನೊಂದು ಬಿಡಿಮಂತ್ರಗಳ ಗುಚ್ಛವಾಗಿದೆ. ಇಲ್ಲಿ ‘ಛಂದಸ್ಸು’ ಎಂಬುದು ರಚನಕಾರನು ತನಗೆ ತಿಳಿದ ಯಾವುದೋ ಸ್ವರ, ಪದಬಂಧ ಯಾ ಲಯದ ಮೂಲಕ ಗದ್ಯಕ್ಕಿಂತ ಭಿನ್ನವಾಗಿ ಕಿವಿಗೆ ಇಂಪಾಗಿರುವಂತೆ ಹಾಡಿಸುವ ಕಲೆಗಾರಿಕೆ. ಈ ಛಂದೋಬದ್ಧ ರಚನೆಗಳು ಮೂರು ಮುಖ್ಯಬಗೆಯವು. ಸ್ವರಭೇದ ವರ್ಣ ಯಾ ಧ್ವನಿವ್ಯತ್ಯಯ ಕಾಲನಿಯಂತ್ರಿತ ತಾಳಸಂಗೀತ ಮೊದಲನೆಯದು ‘ಸ್ಥಾಯಿ’ ಗಳನ್ನು ಉತ್ಪಾತಿಸುವ, ಧ್ವನಿಯ ಆರೋಹಣ, ಅವರೋಹಣಗಳ ಕ್ರಮಬದ್ಧ ಏರಿಳಿತ. ಎರಡನೆಯದು, ಹ್ರಸ್ವ, ದೀರ್ಘಾಕ್ಷರಗಳ ಅಂದರೆ ಲಘು, ಗುರುಗಳ) ಧ್ವನಿ ವ್ಯತ್ಯಯ. ಇವೆರಡಕ್ಕು ಭಿನ್ನವಾದ ಹ್ರಸ್ವ, ದೀರ್ಘಾಕ್ಷರಗಳ ನಿಯಮಿತ ಸರಣಿ ಯಾ ಕಾಲಘಟಕಗಳಿಂದ ಕೂಡಿ, ನಿರ್ದಿಷ್ಟ ಕಾಲಾನಂತರ ಸ್ವರ ಯಾ ಧ್ವನಿಯನ್ನು ಒತ್ತಿ ಉಚ್ಛರಿಸುವುದರಿಂದ ಹೊರಡುವ ಮೇಲ್ಕಾಣಿಸಿದ ಮೂರನೆಯ ‘ನಾದ’ ವೈವಿಧ್ಯ. ಸಾಮಾನ್ಯವಾಗಿ ವೈದಿಕ ಛಂದಸ್ಸುಗಳು ಈ ಮೂರನೆಯ ಬಗೆಯವು. ಈ ಛಂದಸ್ಸು ಉದಾತ್ತ, ಅನುದಾತ್ತ ಅಂದರೆ ಸ್ವರಸ್ಥಾಯಿಗಳ ಏರಿಳಿತಗಳ ಆಧಾರದಮೇಲೆ ನಿರ್ಮಿತವಾದುದು, ಅಲ್ಲದೆ ಹ್ರಸ್ವ,ದೀರ್ಘಾಕ್ಷರಗಳು ಒಂದಕ್ಷರ ಛಂದಸ್ಸಿನ ಮೂಲಾಂಶವಾಗಿ ಗಣಿಸಲ್ಪಟ್ಟವು. ಈ ಅಕ್ಷರವೃತ್ತಗಳೇ ಸಾಮಾನ್ಯವಾಗಿ (ಸಂಸ್ಕೃತ) ವೈದಿಕ ಛಂದಸ್ಸನ್ನು ಪ್ರತಿನಿಧಿಸುತ್ತವೆಂಬ ಅಭಿಪ್ರಾಯವಿದೆ. ಇದರಲ್ಲಿಯೂ ಹಲವಾರು ಪ್ರಭೇದಗಳಿದ್ದು, ಮುಖ್ಯವಾಗಿ ‘ಅನುಷ್ಟುಪ್‌, ತ್ರಿಸ್ಟುಪ್‌ ಹಾಗೂ ಜಗತಿ’ ಎಂಬ ಮೂರು ಮುಖ್ಯ ರೂಪಾಂತರಗಳುಂಟು. ರುದ್ರಾಧ್ಯಾಯವು ‘ಅನುಷ್ಟುಪ್‌ ಛಂದಸ್ಸಿನಲ್ಲಿ ರಚಿತವಾಗಿದ್ದು, ಈ ಮಂತ್ರಗಳನ್ನು ಪಠಿಸುವಾಗ ಹೊರಡುವ ವರ್ಣವೈವಿಧ್ಯತೆಯನ್ನೂ, ನಾದವೈಭವವನ್ನೂ ಸಂಗೀತರಸಿಕರು ಸುಲಭವಾಗಿ ಗ್ರಹಿಸಬಹುದು.
             ಕೊನೆಯದಾಗಿ ಒಂದು ಮಾತು :
ಇಲ್ಲಿ ವರ್ಣಿಸಿರುವ ಮಂತ್ರಗಳು ‘ಶಿವ ಪಂಚಾಕ್ಷರಿ’ಯಂತೆ ಅಮೋಘವಾದುವು. ಶಿವನೇ ರುದ್ರ ರೂಪನಾಗಿ ಸ್ತುತಿಸಲ್ಪಟ್ಟವನಾಗಿಯೂ, ಈ ಮಂತ್ರಗಳನ್ನು ಪುನಶ್ಚರಣೆ ಮಾಡುವ ಪರಿಪಾಠದಿಂದಲೂ ‘ರುದ್ರಾಧ್ಯಾಯವು’ ‘ಶತರುದ್ರೀಯ’ವೆಂತಲೂ ಪ್ರಸಿದ್ಧಿಯಾಗಿದೆ. ಪ್ರಾರಂಭಿಸುವ ಮೊದಲಿಗೆ ‘ನ್ಯಾಸ ವಿಧಿ’ಯಲ್ಲಿ(ಅಂದರೆ ಪ್ರಾಣ ಪ್ರತಿಷ್ಠಾಪನ ವಿಧಿ)ಯಲ್ಲಿ ಹೇಳಲ್ಪಟ್ಟಂತೆ ಶಿವನ ಅಘೋರ ರೂಪವೇ ‘ರುದ್ರ’ನೆಂತಲೂ, ‘ನಮಃ ಶಿವಾಯ’ ಎಂಬ ಪಂಚಾಕ್ಷರಿಯೇ ಬೀಜ ಮಂತ್ರವೂ, ಸದಾಶಿವನ ಕೃಪೆಗಾಗಿಯೇ ಈ ಮಂತ್ರಗಳು ಅನುಷ್ಟುಪ್‌ ಛಂದಸ್ಸಿನಲ್ಲಿರಚಿತವಾಗಿದೆಯೆಂದೂ ಉಕ್ತವಾಗಿರುತ್ತದೆ. ರುದ್ರಮಂತ್ರಗಳ 121 ಪುನರಾವರ್ತನೆಗಳಿಗೆ ‘ರುದ್ರೈಕಾದಶಿನಿ’ ಎಂದೂ, ಇದರ ಹನ್ನೊಂದು ಪಟ್ಟು (1331ಬಾರಿ-) ಮಾಡುವ ಅರ್ಚನಾಕ್ರಮಕ್ಕೆ ‘ಮಹಾರುದ್ರವಿಧಿ’ಯೆಂತಲೂ, ಮತ್ತದರ ಹನ್ನೊಂದು ಆವರ್ತನಗಳ ಪುನಶ್ಚರಣಾ ವಿಧಿಗೆ (14641) ‘ಅತಿರುದ್ರ ವಿಧಿ’ ಎಂತಲೂ ಹೀಗೆ, ಈ ಮಂತ್ರಗಳನ್ನು ಉಚ್ಛರಿಸುತ್ತಾ ಯಜ್ಞ ಹೋಮಗಳನ್ನು ಮಾಡುವುದರಿಂದ ಲೋಕ ಕಲ್ಯಾಣ, ಕ್ಷಾಮ ಪರಿಹಾರ, ಸಂಪದಭಿವೃದ್ಧಿ, ದುಷ್ಟ ನಿರ್ಮೂಲನೆ, ಸಂಸಾರ ಬಂಧನದಿಂದ ಮುಕ್ತಿ, ಹಾಗೂ ಇನ್ನಿತರ ಪ್ರಯೋಜನಗಳುಂಟೆಂದು ಶ್ರೀ ಶಂಕರಾಚಾರ್ಯರು , ಮತ್ತಿತರರ ಭಾಷ್ಯಗಳಿಂದ ತಿಳಿದುಬರುತ್ತದೆ. ಸ್ನಾನಪ್ರಿಯ ಪರಮೇಶ್ವರನಿಗೆ(ಶಿವಲಿಂಗಕ್ಕೆ) ಅಭಿಷೇಕ ಮಾಡುತ್ತ, ಛಂದೋಬದ್ಧ ‘ರುದ್ರಪ್ರಶ್ನ ’ ಮಹಾಮಂತ್ರಗಳನ್ನು ಹ್ರಸ್ವ, ದೀರ್ಘಾಕ್ಷರಗಳ ವರ್ಣ ಮಾಲೆಯ ಲಯಬದ್ಧ ಉಚ್ಛಾರಣೆಯ ಸಮೇತ ಪುನಶ್ಚರಣೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಹೀಗೆ ಹೊರಹೊಮ್ಮುವ ರುದ್ರಸ್ತುತಿಯ ನಾದವೈವಿಧ್ಯ, ಕೇಳುಗರಿಗೆ ಕೊಡುವ ಆನಂದ ಅಪಾರ ಮತ್ತು ಸಂಗೀತಮಯ ಅನುಭವವಂತೂ ವರ್ಣನಾತೀತ ; ಅಲ್ಲದೆ ತೇಜೋಮಯ ಪರಶಿವನಿಗೆ, ಆತನ ಅನುಯಾಯಿಗಳು ಸಲ್ಲಿಸುವ ಭಕ್ತಿಪರವಶತೆಯ ಮಂತ್ರಗುಚ್ಛ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries