ತಿರುವನಂತಪುರ: ನಾಳೆಯಿಂದ ರಾಜ್ಯದಲ್ಲಿ ಖಾಸಗೀ ಬಸ್ ಮಾಲೀಕರು ಅನಿರ್ದಿಷ್ಟಾವಧಿಗೆ ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಿದೆ. ಆದರೆ, ಸರ್ಕಾರದ ಮೇಲೆ ಒತ್ತಡ ಹೇರಿ ಮುಷ್ಕರ ನಡೆಸಬಾರದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ.
ಕೊರೋನಾದಿಂದ ಉಂಟಾದ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗದೆ ಬಸ್ ಮಾಲೀಕರು ಸಿಲುಕಿರುವಾಗಲೂ ಅವರಿಗೆ ಸಹಾಯ ಮಾಡಲು ಸರ್ಕಾರದ ಕಡೆಯಿಂದ ಯಾವುದೇ ನೆರವು ಲಭಿಸಿಲ್ಲ ಎಂದು ಆರೋಪಿಸಲಾಗಿದೆ. ಶುಲ್ಕ ಹೆಚ್ಚಿಸದಿದ್ದರೆ ಮುಷ್ಕರ ನಡೆಸುವುದಾಗಿ ಐದು ತಿಂಗಳ ಹಿಂದೆಯೇ ಬಸ್ ಮಾಲೀಕರು ಸಚಿವರಿಗೆ ತಿಳಿಸಿದ್ದರು. ಈ ಬಗ್ಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ ನಂತರ ಮಾಲೀಕರು ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಈ ನಡುವೆ ಹಲವು ಬಾರಿ ಸಚಿವರನ್ನು ಭೇಟಿ ಮಾಡಿದರೂ ಶುಲ್ಕ ಹೆಚ್ಚಳ ಜಾರಿಯಾಗಿಲ್ಲ. ಬಜೆಟ್‌ನಲ್ಲಿ ಪ್ರಯೋಜನಗಳನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಅದೂ ಸಾಕಾರಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮಾಲೀಕರು ನಿರ್ಧರಿಸಿದ್ದಾರೆ.
ಕನಿಷ್ಠ ಶುಲ್ಕವನ್ನು 12 ರೂ.ಗೆ ಮತ್ತು ವಿದ್ಯಾರ್ಥಿಗಳಿಗೆ ಕನಿಷ್ಠ ರಿಯಾಯಿತಿಯನ್ನು 6 ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಲಾಗಿತ್ತು. ಕೋವಿಡಪ್ ಲಾಕ್ ಡೌನ್ ಕಾಲದ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಬಸ್ ಮಾಲೀಕರು ಒತ್ತಾಯಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಎಸ್‌ಆರ್‌ಟಿಸಿ ಹಲವು ಮಾರ್ಗಗಳನ್ನು ಕಡಿತಗೊಳಿಸಿರುವುದರಿಂದ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.




