ಕಾಸರಗೋಡು: ಕೇರಳ ರಾಜ್ಯ ಮಹಿಳಾ ಆಯೋಗ ಮತ್ತು ಕಾಞಂಗಾಡ್ ಮುನ್ಸಿಪಲ್ ಕಾಪೆರ್Çರೇಷನ್ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ವಿಚಾರ ಸಂಕಿರಣವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸತಿದೇವಿ ಉದ್ಘಾಟಿಸಿದರು. ಜಾತಿ-ಧರ್ಮ-ಭಾಷೆ-ಲಿಂಗ ತಾರತಮ್ಯವಿಲ್ಲದೆ ಸಮಾನ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗಬೇಕು. ಆದರೆ ಮಹಿಳಾ ಸಂಘಟನೆಗಳು ಕೂಡ ಅರ್ಧದಷ್ಟು ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಬಲವಾದ ಮಹಿಳಾ ವಿರೋಧಿ ಪರಿಸ್ಥಿತಿ ಇದೆ. ಇಂದು ಲಿಂಗ ಸಮಾನತೆಗಾಗಿ ಹೋರಾಟ ನಡೆಯುತ್ತಿದೆ. ಮಹಿಳೆಯರು ಮಾತ್ರ ಪ್ರಯತ್ನಿಸಿದರೆ ಲಿಂಗ ಸಮಾನತೆ ಸಾಧ್ಯವಿಲ್ಲ. ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುವಲ್ಲಿ ಪುರುಷರೂ ಭಾಗಿಯಾಗಬೇಕು. ಸಮುದಾಯದಲ್ಲಿ ಪಕ್ಷಿಯ ಎರಡು ರೆಕ್ಕೆಗಳಂತೆ ಪುರುಷ ಹಾಗೂ ಸ್ತ್ರೀ ಜೊತೆಯಾಗಿ ಸಾಗಬೇಕು. ಚಲನಶೀಲತೆಯನ್ನು ಕಳೆದುಕೊಳ್ಳಬಾರದು. ಲಿಂಗ ಲೆಕ್ಕಿಸದೆ ಕೇರಳವು ಜನಪರ ರಾಜ್ಯವಾಗಬೇಕು ಮತ್ತು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ವಾರ್ಡ್‍ನಲ್ಲಿ ಜಾಗೃತ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಪಿ.ಎಂ.ಅದಿರಾ ಅವರು ಲಿಂಗ ಸಮಾನತೆಯ ರಾಜಕೀಯದ ಕುರಿತು ಹಾಗೂ ಪಿ.ಸುಕುಮಾರಿ ಜಾಗೃತ ಸಮಿತಿಗಳ ಕಾರ್ಯವೈಖರಿ ಕುರಿತು ತರಗತಿ ನಡೆಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ ಸ್ವಾಗತಿಸಿದರು. ಕುಟುಂಬಶ್ರೀ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 350 ಮಹಿಳೆಯರು ಪಾಲ್ಗೊಂಡಿದ್ದರು.





