ವಾಷಿಂಗ್ಟನ್: ಉಕ್ರೇನ್ ವಿರದ್ಧ ಸಮರ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಸರ್ವಾಧಿಕಾರಿಯಾಗಿದ್ದು, ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಎಚ್ಚರಿಕೆ ನೀಡಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು,ರಷ್ಯಾದ ಸರ್ವಾಧಿಕಾರಿ ಬೇರೊಂದು ದೇಶ(ಯೂಕ್ರೇನ್)ವನ್ನು ಆಕ್ರಮಿಸಿದ್ದು, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯೂರೋಪ್ ಅನ್ನು ಇಭ್ಭಾಗ ಮಾಡಬಹುದು ಎಂದು ಪುಟಿನ್ ತಿಳಿಸಿದ್ದಾರೆ. ಆದರೆ, ಅದು ತಪ್ಪು. ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ನಡುವಿನ ಯುದ್ಧದಲ್ಲಿ ಪ್ರಜಾಪ್ರಭುತ್ವವೂ ಉದಯಿಸುತ್ತಿದೆ ಮತ್ತು ಇಡೀ ವಿಶ್ವವು ಶಾಂತಿ ಮತ್ತು ಭದ್ರತೆಯನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಯೂಕ್ರೇನ್ ಮೇಲೆ ತನ್ನ ಸೇನೆಯನ್ನು ಛೂ ಬಿಟ್ಟ ವ್ಲಾದಿಮಿರ್ ಪುಟಿನ್ರನ್ನು ಇಡೀ ಜಗತ್ತು ಪ್ರತ್ಯೇಕವಾಗಿ ಇಡುತ್ತಿದೆ. ಅದರ ಮೇಲೆ ಅನೇಕ ರಾಷ್ಟ್ರಗಳು ಹೇರಿರುವ ವಿನಾಶಕಾರಿ ನಿರ್ಬಂಧಗಳು ರಷ್ಯಾದ ಆರ್ಥಿಕ ಬಲವನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಅದರ ಮಿಲಿಟರಿಯನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಪುಟಿನ್ ಈಗ ಹಿಂದೆಂದಿಗಿಂತಲೂ ಹೆಚ್ಚು ಜಗತ್ತಿನಿಂದ ಏಕಾಂಗಿಯಾಗಿದ್ದಾರೆ ಎಂದ ಬೈಡೆನ್, ರಷ್ಯಾ ವಿರುದ್ಧ ಆರ್ಥಿಕ ದಂಡಗಳು ಮತ್ತು ಶಿಕ್ಷೆಯ ವಿಷಯದಲ್ಲಿ ಏನು ಬರಲಿದೆ ಎಂಬುದು ತಿಳಿದಿಲ್ಲ ಎಂದರು.
ರಷ್ಯಾ ವಿರುದ್ಧ ನೇರ ಹೋರಾಟ ಇಲ್ಲ:
ಉಕ್ರೇನ್ ಮೇಲೆ ರಷ್ಯಾ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ದಾಳಿ ನಡೆಯುತ್ತಿದೆ. ನ್ಯಾಟೊ ದೇಶಗಳು ಉಕ್ರೇನ್ ರಕ್ಷಣೆಗೆ ಧಾವಿಸುವುದಿಲ್ಲ ಎಂದೇ ರಷ್ಯಾ ಭಾವಿಸಿಕೊಂಡಿದೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ. ಇಡೀ ವಿಶ್ವವೇ ರಷ್ಯಾದ ನಡೆಯನ್ನು ಖಂಡಿಸಿದೆ. ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ರಷ್ಯಾ ವಿರುದ್ಧ ಉಕ್ರೇನ್ನ ಜನರು ಧೈರ್ಯವಾಗಿ ಹೋರಾಡುತ್ತಿದ್ದಾರೆ. ನಾವು ಉಕ್ರೇನ್ ಪರ ಇರುವುದರು ನಿಜ. ಆದರೆ ರಷ್ಯಾ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದಾರೆ.




