ಕಾಸರಗೋಡು: ಶಿಕ್ಷಕಿಯೊಬ್ಬರ ಪಿಎಫ್ ಮೊತ್ತ ಮಂಜೂರುಗೊಳಿಸುವಲ್ಲಿನ ಲೋಪ ಸರಿಪಡಿಸಿಕೊಡಲು ತನ್ನೊಂದಿಗೆ ಸಹಕರಿಸುವಂತೆ ಕೊಠಡಿಗೆ ಆಹ್ವಾನಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಸರಗೋಡು ಜಿಲ್ಲಾ ಶಿಕ್ಷಣ ಇಲಾಖೆ ಜ್ಯೂನಿಯರ್ ಸೂಪರಿಂಟೆಂಡೆಂಟ್ ಹಾಗೂ ಪಿಎಫ್ ರಾಜ್ಯ ನೋಡೆಲ್ ಅಧಿಕಾರಿ ಆರ್. ವಿನೋದ್‍ಚಂದ್ರನ್ ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕೊಟ್ಟಾಯಂ ಜಿಲ್ಲೆಯ ಶಿಕ್ಷಕಿಯೊಬ್ಬರು ತಮ್ಮ ಪಿಎಫ್‍ನಲ್ಲಿ ಕೆಲವೊಂದು ನ್ಯೂನತೆಗಳಿರುವುದನ್ನು ಅಲ್ಲಿನ ಜಿಲ್ಲಾ ನೋಡೆಲ್ ಅಧಿಕಾರಿ ಗಮನಕ್ಕೆ ತಂದಿದ್ದರು. ಈ ಲೋಪ ಸರಿಪಡಿಸಲು ರಾಜ್ಯಮಟ್ಟದ ನೋಡೆಲ್ ಅಧಿಕಾರಿಗೆ ಮಾತ್ರ ಸಾಧ್ಯವಿದ್ದು, ಅವರನ್ನು ಸಂಪರ್ಕಿಸಲು ಸೂಚಿಸಲಾಗಿತ್ತು. ಈ ನಿಟ್ಟಿನಲ್ಲಿ ಆರ್. ವಿನೋದ್‍ಚಂದ್ರನ್ ಅವರನ್ನು ಮೊಬೈಲಲ್ಲಿ ಸಂಪರ್ಕಿಸಿದಾಗ ಅನುಚಿತವಾಗಿ ವರ್ತಿಸಿದ್ದರೆನ್ನಲಾಗಿದೆ. ಪಿಎಫ್ ಲೋಪ ಸರಿಪಡಿಸಿಕೊಟ್ಟಿದ್ದ ಈತ ಇದಕ್ಕೆ ಪ್ರತಿಫಲವಾಗಿ ಶಿಕ್ಷಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ, ತನ್ನನ್ನು ಮುಖತ: ಭೇಟಿಯಾಗುವಂತೆ ಶಿಕ್ಷಕಿಗೆ ತಿಳಿಸಿದ್ದನು. ಈ ಬಗ್ಗೆ ಕೋಟ್ಟಾಯಂ ಜಿಲ್ಲಾ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಶಿಕ್ಷಕಿ, ಅಧಿಕಾರಿಗಳ ನಿರ್ದೇಶ ಪ್ರಕಾರ ವಿನೋದ್‍ಚಂದ್ರನ್ ಬೇಡಿಕೆ ಒಪ್ಪಿಕೊಂಡಿದ್ದರು. ಕಾಸರಗೋಡಿನಿಂದ ಕೋಟ್ಟಾಯಂಗೆ ರೈಲಿನಲ್ಲಿ ತೆರಳಿದ ವಿನೋದ್‍ಚಂದ್ರನ್, ತನ್ನ ಬಟ್ಟೆ ಕೊಳಕಾದ ಹಿನ್ನೆಲೆಯಲ್ಲಿ ಹೊಸ ಟಿಶರ್ಟ್ ಖರೀದಿಸಿ ಬರುವಂತೆ ಶಿಕ್ಷಕಿಗೆ ತಿಳಿಸಿದ್ದನು. ವಿಜಿಲೆನ್ಸ್ ಅಧಿಕಾರಿಗಳು ಟಿಶರ್ಟ್ ಖರೀದಿಸಿ, ಅದಕ್ಕೆ ರಾಸಾಯನಿಕ ಸಿಂಪಡಿಸಿ ನೀಡಿದ್ದರು. ಶಿಕ್ಷಕಿ ವಿನೋದ್‍ಚಂದ್ರನ್‍ನನ್ನು ಇದಿರುಗೊಂಡು ಶರ್ಟ್ ಹಸ್ತಾಂತರಿಸುತ್ತಿದ್ದಂತೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.

