ಕೊಚ್ಚಿ: ಕೆ-ರೈಲ್ ವಿರುದ್ಧದ ಸಾರ್ವಜನಿಕ ಆಕ್ರೋಶಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಕೆ-ರೈಲ್‌ಗಾಗಿ ಸರ್ವೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಸರ್ಕಾರದ ವಿರುದ್ಧ ಪ್ರಬಲವಾದ ಜನ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಸಿಪಿಎಂ ಪಕ್ಷದ ಸಮ್ಮೇಳನದ ಹಿನ್ನೆಲೆಯಲ್ಲಿ ಉತ್ತರ ಕೇರಳದಲ್ಲಿ ಸಮೀಕ್ಷೆ ಕಾರ್ಯವನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಆದರೆ ಇದಾದ ಬಳಿಕ ಮಧ್ಯ ಕೇರಳದಲ್ಲೂ ಸರ್ವೆ ಸ್ಥಗಿತಗೊಂಡಿತ್ತು. ಕಣ್ಣೂರಿನಲ್ಲಿ ಪಕ್ಷದ ಸಮ್ಮೇಳನದ ನಂತರ ಏಪ್ರಿಲ್‌ನಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಹೇಳಿತ್ತು. ಇದರ ಬೆನ್ನಲ್ಲೇ ಮಧ್ಯ ಕೇರಳದಲ್ಲಿ ಸರ್ವೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಪ್ರತಿಭಟನೆಗೆ ಸರಕಾರ ಮಂಡಿಯೂರಿರುವುದು ಸ್ಪಷ್ಟವಾಗಿದೆ.
ಎರ್ನಾಕುಳಂ, ಕೋಯಿಕ್ಕೋಡ್, ಕೊಟ್ಟಾಯಂ, ಕೊಲ್ಲಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ, ಸಾರ್ವಜನಿಕ ಆಕ್ರೋಶವನ್ನು ತಣಿಸಲು ಎರ್ನಾಕುಳಂ ಜಿಲ್ಲೆಯಲ್ಲಿ ಸಮೀಕ್ಷೆಗೆ ಮುಂದಾಗಲು ಸಾಧ್ಯವಿಲ್ಲ ಎಂದು ಸಂಸ್ಥೆಗಳು ಸರ್ಕಾರಕ್ಕೆ ತಿಳಿಸಿದ್ದವು. ಎಲ್ಲ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇರುವುದರಿಂದ ವಿಸ್ತೃತ ಸಮಾಲೋಚನೆ ಬಳಿಕವೇ ಮತ್ತೊಮ್ಮೆ ಸಮೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸೂಚನೆಗಳಿವೆ. ಕಳೆದ ಕೆಲವು ದಿನಗಳಿಂದ ಕೆ-ರೈಲ್ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಇದೇ ವೇಳೆ ಸರಕಾರ ಯೋಜನೆ ಜಾರಿಯಾಗುವುದಿಲ್ಲ ಎಂಬ ಭರವಸೆ ನೀಡಿ ಸರ್ವೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿದೆಯೇ ಎಂಬ ಅನುಮಾನ ಮೂಡಿದೆ. ನಿನ್ನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಯೋಜನೆ ಕುರಿತು ಚರ್ಚಿಸಿದ್ದರು. ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು ಸಿಎಂ ಈ ಹಿಂದೆಯೇ ಹೇಳಿದ್ದರು. ಆದರೆ, ಈ ಯೋಜನೆ ಸಂಕೀರ್ಣವಾಗಿದ್ದು, ವಿಸ್ತೃತ ಅಧ್ಯಯನದ ನಂತರವಷ್ಟೇ ಅನುಮೋದನೆ ನೀಡಲು ಸಾಧ್ಯ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಇದರೊಂದಿಗೆ ಕೆ-ರೈಲ್‌ನ ಸಾಧ್ಯತೆ ಬಹುತೇಕ ಕಳೆಗುಂದಿದೆ.



