ನವದೆಹಲಿ: ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದ್ದು, ರೂ. 27.07 ಲಕ್ಷ ಕೋಟಿಯಷ್ಟು ದಾಖಲೆ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಬ್ ಶುಕ್ರವಾರ ತಿಳಿಸಿದರು.
ಏಪ್ರಿಲ್ 2021 ರಿಂದ ಮಾರ್ಚ್ 2022ರವರೆಗೆ ಒಟ್ಟು ತೆರಿಗೆ ಸಂಗ್ರಹ ರೂ. 27. 07 ಲಕ್ಷ ಕೋಟಿಯಷ್ಟಾಗಿದೆ. ವ್ಯಕ್ತಿಗಳು ಪಾವತಿಸುವ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆಯಿಂದ ರೂ. 14. 10 ಲಕ್ಷ ಕೋಟಿ ಸಂಗ್ರಹವಾಗಿದ್ದು, ಬಜೆಟ್ ಅಂದಾಜಿಗಿಂತ ರೂ. 3.02 ಲಕ್ಷ ಕೋಟಿ ಹೆಚ್ಚಾಗಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಅಬಕಾರಿ ಸುಂಕದಂತಹ ಪರೋಕ್ಷ ತೆರಿಗೆಯಲ್ಲಿ ಬಜೆಟ್ ಅಂದಾಜಿಗಿಂತ ರೂ. 1.88 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ರೂ. 11. 02 ಲಕ್ಷ ಕೋಟಿ ಬಜೆಟ್ ಅಂದಾಜಿಗೆ ವಿರುದ್ಧವಾಗಿ ಪರೋಕ್ಷ ತೆರಿಗೆಯಲ್ಲಿ ರೂ. 12. 90 ಲಕ್ಷ ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ನೇರ ತೆರಿಗೆಯಲ್ಲಿ ಶೇ. 49 ಮತ್ತು ಪರೋಕ್ಷ ತೆರಿಗೆಯಲ್ಲಿ ಶೇ. 30 ರಷ್ಟು ಪ್ರಗತಿಯಾಗಿರುವುದಾಗಿ ಅವರು ತಿಳಿಸಿದರು.


