ನವದೆಹಲಿ:ಕಾಯ್ದೆಯ ದುರುಪಯೋಗ ನಡೆಯುವುದಿಲ್ಲ ಎಂದು ಖಾತರಿಪಡಿಸಲು ಸರ್ಕಾರ ಅಗತ್ಯ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಷಾ ಸದನಕ್ಕೆ ಭರವಸೆ ನೀಡಿದ ಬಳಿಕ ವಿವಾದಾತ್ಮಕ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ.
0
samarasasudhi
ಏಪ್ರಿಲ್ 05, 2022
ನವದೆಹಲಿ:ಕಾಯ್ದೆಯ ದುರುಪಯೋಗ ನಡೆಯುವುದಿಲ್ಲ ಎಂದು ಖಾತರಿಪಡಿಸಲು ಸರ್ಕಾರ ಅಗತ್ಯ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಷಾ ಸದನಕ್ಕೆ ಭರವಸೆ ನೀಡಿದ ಬಳಿಕ ವಿವಾದಾತ್ಮಕ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ.
ಜನಸಾಮಾನ್ಯರಿಗೆ ಕಿರುಕುಳ ನೀಡಲು ಮತ್ತು ಮಾಹಿತಿ ದುರುಪಯೋಗಪಡಿಸಿಕೊಳ್ಳಲು ಈ ಮಸೂದೆಯನ್ನು ಕಾನೂನು ಜಾರಿ ಅಧಿಕಾರಿಗಳು ಬಳಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇದ್ದು, ಇದು ವೈಯಕ್ತಿಕ ಖಾಸಗಿತನದ ಉಲ್ಲಂಘನೆ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.
ಎಲ್ಲ ಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಧ್ವನಿಮತದಿಂದ ಮಸೂದೆ ಆಂಗೀಕಾರವಾಗುವ ಮುನ್ನ ಗೃಹಸಚಿವ ಅಮಿತ್ ಷಾ ಭರವಸೆ ನೀಡಿ, "ಮಸೂದೆಯನ್ನು ನಿಶ್ಚಿತವಾಗಿ ಸ್ಥಾಯಿ ಸಮಿತಿಗೆ ಕಳುಹಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.
ಈ ಮಸೂದೆಯಿಂದಾಗಿ ತನಿಖಾ ಅಧಿಕಾರಿಗಳು ಅಪರಾಧಿಗಳಿಂದ ಎರಡು ಹೆಜ್ಜೆ ಮುಂದೆ ಇರಲಿದ್ದಾರೆ ಎಂಬ ಖಾತರಿ ಇದೆ ಎಂದು ಷಾ ಬಣ್ಣಿಸಿದರು. ಮಾನವ ಹಕ್ಕುಗಳ ಬಗ್ಗೆ ಆಕ್ಷೇಪ ಎತ್ತುವವರು, ಅಪರಾಧ ಸಂತ್ರಸ್ತರ ಹಕ್ಕುಗಳ ಬಗ್ಗೆಯೂ ಕಳಕಳಿ ತೋರಬೇಕು ಎಂದು ಅಮಿತ್ ಷಾ ಚುಚ್ಚಿದರು.
ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಸೇರಿದಂತೆ ಬಹುತೇಕ ಎಲ್ಲ ವಿರೋಧ ಪಕ್ಷಗಳು ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ-2022ಕ್ಕೆ ಸೋಮವಾರ ಲೋಕಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದವು. ಮಾಹಿತಿ ಸಂರಕ್ಷಣೆಯ ಯಾವುದೇ ಕಾನೂನುಗಳು ಇಲ್ಲದೇ ಪೊಲೀಸರು ಸಾರ್ವಜನಿಕರ ಮಾಹಿತಿಯನ್ನು ಸಂಗ್ರಹಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆಕ್ಷೇಪ ವ್ಯಕ್ತವಾಯಿತು.
ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಅಥವಾ ಭದ್ರತೆ ಕುರಿತ ಆಯ್ದ ಸಮಿತಿಗೆ ಪರಾಮರ್ಶೆಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು. ವೈ.ಎಸ್.ಜಗನ್ಮೋಹನ ರೆಡ್ಡಿಯವರ ವೈಎಸ್‍ಆರ್‍ಸಿಪಿ ಮಸೂದೆಯನ್ನು ಬೆಂಬಲಿಸಿದರೂ, ಪಕ್ಷದ ಸಂಸದ ಮಿಧುನ್ ರೆಡ್ಡಿ, "ಈ ಕಾಯ್ದೆ ದುರ್ಬಳಕೆ ಆಗುವುದಿಲ್ಲ ಎಂಬ ಖಾತರಿಯನ್ನು ಸರ್ಕಾರ ನೀಡಬೇಕು" ಎಂದು ಆಗ್ರಹಿಸಿದರು.