ನವದೆಹಲಿ:ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಾಗೂ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಸುಜಾತ್ ಅಂಬೇಡ್ಕರ್ ಅವರಿಗೆ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ (ಟಿಐಎಸ್‌ಎಸ್) ಇಲ್ಲಿ ಇಂದು ನಡೆಯಲಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಡಳಿತ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು ಎಂದು ಸಂಸ್ಥೆಯ ಅಂಬೇಡ್ಕರೈಟ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಹೇಳಿದೆ.
"ಯಾವುದೇ ವ್ಯಕ್ತಿಯ ಕುರಿತಂತೆ ತಾರತಮ್ಯಕಾರಿ ನೀತಿಯನ್ನು ಸಂಸ್ಥೆ ಹೊಂದಿಲ್ಲ ಆದರೆ ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ 'ಹೊರಗಿನವರು' ಆಗಮಿಸುವುದಕ್ಕೆ ತನ್ನ ವಿರೋಧವಿದೆ,'' ಎಂದು ಸಂಸ್ಥೆ ಹೇಳಿದೆ.
ಕಾರ್ಯಕ್ರಮಕ್ಕೆ ಅನುಮತಿಯನ್ನು ಎಪ್ರಿಲ್ 8ರಂದು ಕೋರಲಾಗಿತ್ತು, ಕಾರ್ಯಕ್ರಮಕ್ಕೆ ಒಪ್ಪಿಗೆ ದೊರಕಿದ್ದರೂ ಹೊರಗಿನವರಿಗೆ ಪ್ರವೇಶವಿಲ್ಲ ಎಂದು ಆಡಳಿತ ಹೇಳಿತ್ತು.
ಆದರೆ ಕಳೆದ ತಿಂಗಳು ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊರಗಿನವರು ಹೇಗೆ ಭಾಗವಹಿಸಿದ್ದರು ಎಂದು ಸಂಘ ಪ್ರಶ್ನಿಸಿದೆ.
"ಸ್ಟೇಟ್ ಆಫ್ ಇಂಡಿಯಾ ಎಜುಕೇಶನ್ ರಿಪೋರ್ಟ್ ಬಿಡುಗಡೆ ಸಮಾರಂಭ ಎಪ್ರಿಲ್ 6ರಂದು ನಡೆದಾಗ ಹಾಗೂ ಮಾರ್ಚ್ 21-25ರ ನಡುವೆ ನಡೆದ ಸರ್ವಿಸ್ ತರಬೇತಿ ಕಾರ್ಯಕ್ರಮಕ್ಕೆ ಹಲವು ಹೊರಗಿನವರು ಆಗಮಿಸಿದ್ದರು" ಎಂದು ಅಂಬೇಡ್ಕರೈಟ್ ವಿದ್ಯಾರ್ಥಿ ಸಂಘ ಹೇಳಿದೆ.
"ಅಂಬೇಡ್ಕರ್ ಅವರ ಕುಟುಂಬ ಸದಸ್ಯರೊಬ್ಬರಿಗೆ ಈ ರೀತಿ ಕ್ಯಾಂಪಸ್‍ಗೆ ಪ್ರವೇಶ ನಿರಾಕರಿಸುವುದು ಆಧುನಿಕ ರೀತಿಯ ಅಸ್ಪೃಶ್ಯತೆ ಎಂದು ನಾವು ನಂಬಿದ್ದೇವೆ,'' ಎಂದು ಸಂಘ ಹೇಳಿದೆ.
ಸುಜಾತ್ ಅಂಬೇಡ್ಕರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದರು ಎನ್ನಲಾಗಿದೆ.