ನವದೆಹಲಿ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಂಬಂಧಿಸಿದ ಆದೇಶಕ್ಕೆ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗವು ಗುರುವಾರ ಅಂತಿಮ ಅಂಕಿತ ಹಾಕಿತು.
0
samarasasudhi
ಮೇ 05, 2022
ನವದೆಹಲಿ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಂಬಂಧಿಸಿದ ಆದೇಶಕ್ಕೆ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗವು ಗುರುವಾರ ಅಂತಿಮ ಅಂಕಿತ ಹಾಕಿತು.
ಮೂವರು ಸದಸ್ಯರಿರುವ ಆಯೋಗದ ಅವಧಿಯು ಶುಕ್ರವಾರ (ಮೇ 6) ಕೊನೆಗೊಳ್ಳಲಿದೆ.
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಅವುಗಳ ವ್ಯಾಪ್ತಿಯನ್ನು ಒಳಗೊಂಡಿರುವ ವರದಿ ಹಾಗೂ ಆದೇಶದ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನಂತರ, ಈ ವಿಷಯಕ್ಕೆ ಸಂಬಂಧಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 83 ರಿಂದ 90ಕ್ಕೆ ಹೆಚ್ಚಿಸುವಂತೆ ಆಯೋಗವು ಪ್ರಸ್ತಾವ ಸಲ್ಲಿಸಿದೆ. ಈ ಪೈಕಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) 24 ಕ್ಷೇತ್ರಗಳು ಖಾಲಿಯೇ ಇರಲಿವೆ.
ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡಗಳಿಗೆ 9 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಜಮ್ಮುವಿಗೆ ಆರು ಸ್ಥಾನಗಳು ಹಾಗೂ ಕಾಶ್ಮೀರಕ್ಕೆ ಒಂದು ಸ್ಥಾನ ಹೆಚ್ಚುವರಿಯಾಗಿ ಒದಗಿಸಲು ಸಹ ಪ್ರಸ್ತಾವ ಸಲ್ಲಿಸಿದೆ. ಪ್ರಸ್ತುತ, ಕಾಶ್ಮೀರ ವಿಭಾಗದಲ್ಲಿ 46 ಹಾಗೂ ಜಮ್ಮು ವಿಭಾಗದಲ್ಲಿ 37 ಸ್ಥಾನಗಳಿವೆ.
2020ರ ಮಾರ್ಚ್‌ನಲ್ಲಿ ಆಯೋಗವನ್ನು ರಚಿಸಲಾಗಿತ್ತು. ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ಚಂದ್ರ ಹಾಗೂ ಜಮ್ಮು-ಕಾಶ್ಮೀರ ಚುನಾವಣಾ ಆಯುಕ್ತರು ಈ ಆಯೋಗದ ಪದನಿಮಿತ್ತ ಸದಸ್ಯರಾಗಿದ್ದಾರೆ.