ಮುಂಬೈ: ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಸಾಕಾಗಲ್ಲ, ಆರೇಳು ವರ್ಷಗಳ ಹಿಂದೆ ಎಷ್ಟಿತ್ತೋ ಅಷ್ಟು ಮಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕನಿಷ್ಠ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ ಎಂದು ಠಾಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 18.42 ರೂ. ಹೆಚ್ಚಿಸಲಾಗಿತ್ತು ಮತ್ತು ಇಂದು 8 ರೂ. ಇಳಿಕೆಯಾಗಿದೆ, ಆದರೆ ಡೀಸೆಲ್ ಮೇಲಿನ ಸುಂಕವನ್ನು ಲೀಟರ್‌ಗೆ 18.24 ರೂ. ಹೆಚ್ಚಿಸಿ ಈಗ 6 ರೂ. ಇಳಿಸಲಾಗಿದೆ. ತೀವ್ರ ಏರಿಕೆಯನ್ನು ಮಾಡಿ ನಂತರ ಕನಿಷ್ಠ ಕಡಿತವನ್ನು ನೀಡುವುದು ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಉದ್ದವ್ ಠಾಕ್ರೆ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್, ಕೇಂದ್ರ ಸರ್ಕಾರ ಮೇಜರ್ ರಿಲೀಫ್ ನೀಡಿರುವಾಗ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


