ಈ ಸಂಬಂಧ, ಸಿಬಿಐ ಮಂಗಳವಾರ ಬೆಳಿಗ್ಗೆ ಕಾರ್ತಿ ಚಿದಂಬರಂ ಅವರ ಚೆನ್ನೈ ಮತ್ತು ದೆಹಲಿಯ ನಿವಾಸಗಳು ಸೇರಿದಂತೆ ದೇಶದ ಅನೇಕ ನಗರಗಳ 10 ಸ್ಥಳಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಮೂರು, ಮುಂಬೈನಲ್ಲಿ ಮೂರು ಮತ್ತು ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಒಡಿಶಾದಲ್ಲಿ ತಲಾ ಒಂದು ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಕಾರ್ತಿ ಚಿದಂಬರಂ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ ಚಿದಂಬರಂ ಅವರ ಅಧಿಕೃತ ನಿವಾಸಕ್ಕೂ ಸಿಬಿಐ ತಂಡ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನನಗೆ ಎಣಿಕೆಯೇ ಸಿಗುತ್ತಿಲ್ಲ. ಅದು ಎಷ್ಟು ಬಾರಿ ಸಿಬಿಐ ದಾಳಿ ಆಗಿದೆಯೋ? ಇದು ದಾಖಲೆಯಾಗಿರಬೇಕು' ಎಂದು ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದ 2011ರ ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ತಲ್ವಾಂಡಿ ಸಾಬೋ ವಿದ್ಯುತ್ ಯೋಜನೆಗಾಗಿ 250 ಚೀನೀ ಪ್ರಜೆಗಳಿಗೆ ನಿಯಮ ಮೀರಿ ವೀಸಾ ಕೊಡಿಸಲು ಕಾರ್ತಿ 50 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಪಂಜಾಬ್‌ನಲ್ಲಿ ಪವರ್ ಪ್ರಾಜೆಕ್ಟ್ ಗುತ್ತಿಗೆ ಪಡೆದಿದ್ದ ಚೀನಾ ಸಂಸ್ಥೆಗೆ ಆದಷ್ಟು ಬೇಗ ಕಾಮಗಾರಿ ಮುಗಿಸಲು ನೌಕರರ ಅಗತ್ಯವಿತ್ತು. ಆದರೆ, ವಿದೇಶಿ ಪ್ರಜೆಗಳ ಕೆಲಸದ ಪರವಾನಗಿಯನ್ನು ಅನುಮತಿಸಲು ನಿಯಮಗಳಲ್ಲಿ ಅವಕಾಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭ ಸಂಸ್ಥೆಯು ಕಾರ್ತಿ ಅವರನ್ನು ಸಂಪರ್ಕಿಸಿದೆ. ಕಾರ್ತಿ ನಿಯಮಾವಳಿಗಳನ್ನು ಮೀರಿ ಅವರಿಗೆ ವೀಸಾ ಕೊಡಿಸಲು ತಮ್ಮ ಪ್ರಭಾವವನ್ನು ಬಳಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ದೂರಿದ್ದಾರೆ.
ಕಾರ್ತಿ ವಿರುದ್ಧ ಐಎನ್‌ಎಕ್ಸ್ ಮೀಡಿಯಾ ಮತ್ತು ಏರ್‌ಸೆಲ್ ಮ್ಯಾಕ್ಸಿಸ್ ಕಂಪನಿಗಳ ಪ್ರಕರಣದಲ್ಲಿ ಈಗಾಗಲೇ ತನಿಖೆ ನಡೆಸುತ್ತಿರುವ ಸಿಬಿಐಗೆ ಈ ಪ್ರಕರಣದ ಸುಳಿವು ಸಿಕ್ಕಿದೆ.
ಹಣದ ವಹಿವಾಟುಗಳ ಪರಿಶೀಲನೆಯ ನಂತರ, ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಲು ಚೀನಾದ ಕಾರ್ಮಿಕರ ವೀಸಾವನ್ನು ಸುಗಮಗೊಳಿಸುವುದಕ್ಕಾಗಿ 50 ಲಕ್ಷ ರೂಪಾಯಿ ಲಂಚದ ಪಾವತಿಯನ್ನು ಸಿಬಿಐ ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.