ಕಾಸರಗೋಡು: ಹಿರಿಯ ನಾಗರಿಕರು ತಮ್ಮ ಕಳವಳ ಮತ್ತು ಸಂತಸಗಳನ್ನು ಪರಸ್ಪರ ಹಂಚಿಕೊಂಡರು. ಜಿಲ್ಲಾ ಪಂಚಾಯಿತಿಯ 14ನೇ ಪಂಚವಾರ್ಷಿಕ ಯೋಜನೆಯ ಅಂಗವಾಗಿ ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿಯಿಂದ ಇಂತಹದೊಂದು ಸಮ್ಮಿಲನ ಕಾರ್ಯಕ್ರಮ ನಡೆಯಿತು. ನೌಕಾಪಡೆಯ ನಿವೃತ್ತ ಕಮಾಂಡರ್ ಪ್ರಸನ್ನ ಇಡಯಿಲ್ಲಂ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ ಅಧ್ಯಕ್ಷತೆ ವಹಿಸಿದ್ದರು.
ವಯೋವೃದ್ಧರನ್ನು ಹೇಗೆ ಒಂದುಗೂಡಿಸಬೇಕು ಮತ್ತು ಅವರಿಗಾಗಿ ಯಾವ ಅನುಸರಣಾ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ವೃದ್ಧರನ್ನು ನೋಡಿಕೊಳ್ಳುವವರು ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಸಮಾಜವು ಹಿರಿಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಮೊದಲಿನಿಂದಲೂ ಕಲಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ ವೃದ್ಧರಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಅಗತ್ಯ ನೆರವು ನೀಡಬೇಕು ಎಂದರು. ವೃದ್ಧರ ರಕ್ಷಣೆಗೆ ಸರ್ಕಾರ ಬೃಹತ್ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಯೋಮಿತ್ರ ಕಾರ್ಯಕ್ರಮವನ್ನು ಎಲ್ಲ ಪಂಚಾಯಿತಿಗಳಿಗೂ ವಿಸ್ತರಿಸಬೇಕು ಹಾಗೂ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ವೃದ್ಧಾಪ್ಯ ಸಂಘಗಳನ್ನು ರಚಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ.ಕೆ.ಶೀಬಾ ಮುಮ್ತಾಜ್ ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಹಾಗೂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅ. ಎಸ್.ಎನ್.ಸರಿತಾ, ಜಿಲ್ಲಾ ಪಂಚಾಯಿತಿ ಯೋಜನಾ ಅನುವುಗಾರ ಎಚ್.ಕೃಷ್ಣ, ಸಮನ್ವಯ ಅಧಿಕಾರಿ ಥಾಮಸ್ ಟಿ.ತಾಯಿಲ್, ಹಿರಿಯ ನಾಗರಿಕರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಪಿ.ಕೆ.ಅಬ್ದುಲ್ ರೆಹಮಾನ್, ಹಿರಿಯ ಸಲಹೆಗಾರ ಸದಸ್ಯ ಬಾಲಕೃಷ್ಣನ್, ಸಿ.ಎಲ್.ಹಮೀದ್, ಕುಂಞÂ್ಞ ಕೃಷ್ಣನ್, ತಂಬಾನ್ ಮೇಲತ್, ಗಂಗಾಧರನ್, ಕೆ.ಪಿ.ನಾರಾಯಣನ್, ಶೈನಿ, ಸಿಸ್ಟರ್ ಜಯ, ಮತ್ತು ಇತರರು ಮಾತನಾಡಿದರು. ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ಜಾಯ್ಸ್ ಸ್ಟೀಫನ್ ಸ್ವಾಗತಿಸಿ, ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ ಕಿರಿಯ ಅಧೀಕ್ಷಕ ಪಿ.ಕೆ.ಜಯೇಶ್ ವಂದಿಸಿದರು.





