ಕಾಸರಗೋಡು: ವಿಷಾಹಾರ ಸೇವಿಸಿ ಮೃತಪಟ್ಟ ವಿದ್ಯಾರ್ಥಿನಿ ಶವರ್ಮ ಸೇವಿಸಿದ ಚೆರುವತ್ತೂರಿನ ಐಡಿಯಲ್ ಫುಡ್ ಪಾಯಿಂಟ್‍ನಲ್ಲಿನ ಆಹಾರದ ಮಾದರಿಯಲ್ಲಿ ಇ.ಕೋಲಿ ಮತ್ತು ಕೋಲಿಫಾರ್ಮ್ ಬ್ಯಾಕ್ಟಿರಿಯಾ ಇರುವಿಕೆ ಪತ್ತೆಯಾಗಿದೆ. ಕೋಝಿಕ್ಕೋಡ್ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಈ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿದಾಗ, ಅವು ಸಾವಿಗೆ ಕಾರಣವಾಗಬಹುದು.
ಶÀವರ್ಮಾ, ಮಿಯಾಸಿಸ್(ಖಾದ್ಯಕ್ಕೆ ಬಳಸಿದ ಎಣ್ಣೆ), ಉಪ್ಪಿನಲ್ಲಿ ಮಿಶ್ರಗೊಳಿಸಿದ ಹಣ್ಣುಗಳು ಮತ್ತು ಮಸಾಲೆಯುಕ್ತ ಪುಡಿಗಳಲ್ಲಿ ಬ್ಯಾಕ್ಟೀರಿಯಾದ ಇರುವಿಕೆ ಕಂಡುಬಂದಿದೆ. ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಕೂಲ್‍ಬಾರ್‍ನಲ್ಲಿ ತಪಾಸಣೆ ನಡೆಸಿತ್ತು. ಇದೇ ವೇಳೆ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮೃತ ಬಾಲಕಿಗೆ ಶಿಗೆಲ್ಲ ಸೋಂಕು ತಗುಲಿತ್ತು ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿತ್ತು. ಈ ಸಂದರ್ಭದಲ್ಲಿ, ಆಹಾರ ಮಾದರಿಗಳಲ್ಲಿ ಶಿಗೆಲ್ಲದ ಉಪಸ್ಥಿತಿಯನ್ನು ಸಹ ಪರಿಶೀಲಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಅಧಿಕಾರಿಗಳು ವರದಿ ಬಿಡುಗಡೆ ಮಾಡಲಿದ್ದಾರೆ.
ಅನೈರ್ಮಲ್ಯ ವಾತಾವರಣದಲ್ಲಿ ಹೋಟೆಲ್ ಕಾರ್ಯಾಚರಿಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಆಹಾರದಲ್ಲಿ ಬ್ಯಾಕ್ಟೀರಿಯಾದ ಇರುವಿಕೆಯೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಇಲ್ಲಿಂದ ಆಹಾರ ಸೇವಿಸಿ ಚಿಕಿತ್ಸೆ ಪಡೆದ ರೋಗಿಗಳ ಪ್ಲೇಟ್ ಲೆಟ್ ಗಳಲ್ಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ.





