ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ನಾಮಪತ್ರ ಸಲ್ಲಿಸಿದ್ದು, ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟವಾಗಿದೆ, ವ್ಯಕ್ತಿಗಳಲ್ಲ ಎಂದು ಅನೇಕ ವಿಪಕ್ಷಗಳ ಮುಖಂಡರು ಸೋಮವಾರ ಹೇಳಿದ್ದಾರೆ.
ಒಂದು ಕಡೆ ಆರ್ ಎಸ್ ಎಸ್ ದ್ವೇಷ ಮತ್ತು ಇನ್ನೊಂದು ಕಡೆ ಎಲ್ಲ ವಿರೋಧ ಪಕ್ಷಗಳ ಅನುಕಂಪ ಎಂಬ ಎರಡು ಸಿದ್ಧಾಂತಗಳ ನಡುವಿನ ನಿಜವಾದ ಹೋರಾಟ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದೆ.
ನಾವೆಲ್ಲ ಒಟ್ಟಾಗಿ ಯಶವಂತ ಸಿನ್ಹಾ ಅವರನ್ನು ಬೆಂಬಲಿಸುತ್ತೇವೆ. ವ್ಯಕ್ತಿಗತವಾಗಿ ನಾವು ಬೆಂಬಲಿಸುತ್ತೇವೆ ಆದರೆ, ಎರಡು ಸಿದ್ದಾಂತಗಳ ನಡುವೆ ನಿಜವಾದ ಹೋರಾಟವಿದೆ. ಒಂದು ಆರ್ ಎಸ್ ಎಸ್ ನ ಕೋಪ, ದ್ವೇಷದ ಸಿದ್ದಾಂತ, ಮತ್ತೊಂದೆಡೆ ಎಲ್ಲಾ ವಿಪಕ್ಷಗಳ ಅನುಕಂಪದ ಸಿದ್ಧವಾಗಿದೆ. ಎಲ್ಲಾ ವಿರೋಧ ಪಕ್ಷಗಳು ಸಿನ್ಹಾ ಅವರನ್ನು ಬೆಂಬಲಿಸಲಿವೆ ಎಂದು ಹೇಳಿದರು.
ಯಶವಂತ ಸಿನ್ಹಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಟಿಎಂಸಿ ಮುಖಂಡ ಸೌಗತ ರಾಯ್ ಹೇಳಿದ್ದಾರೆ. ಇದು ಗುರುತಿನ ರಾಜಕಾರಣದ ಪ್ರಶ್ನೆಯೇ ಅಲ್ಲ ಎಂದು ಸಿಪಿಐ (ಎಂ) ನ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ ಆದರೆ, ಇದು ಸಿದ್ಧಾಂತಗಳ ಸ್ಪರ್ಧೆಯಾಗಿದೆ ಎಂದಿದ್ದಾರೆ.
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಯಶವಂತ ಸಿನ್ಹಾ ನಾಮಪತ್ರ ಸಲ್ಲಿಕೆ ವೇಳೆ ಅನೇಕ ವಿಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.





