ಕುಂಬಳೆ: ಕರ್ನಾಟಕದ ಪಠ್ಯಕ್ರಮ ಪರಿಷ್ಕರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ಶ್ರೀನಾರಾಯಣ ಗುರು ಹಾಗೂ ಕನ್ನಡದ ಖ್ಯಾತ ಕವಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರನ್ನು ಮತ್ತೊಮ್ಮೆ ಸೇರಿಸಬೇಕೆಂದು ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕರ್ನಾಟಕದ ಏಳನೇ ತರಗತಿಯ ಸಮಾಜ ಅಧ್ಯಯನ ಪುಸ್ತಕದಿಂದ ಶ್ರೀ ನಾರಾಯಣ ಗುರು ಮತ್ತು ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರುಗಳ ಸಹಿತ ಅನೇಕ ಪ್ರಮುಖ ಸಾಮಾಜಿಕ-ರಾಜಕೀಯ ನಾಯಕರು ಮತ್ತು ಬರಹಗಾರರ ಹೆಸರುಗಳು ಮತ್ತು ಇತಿಹಾಸಗಳನ್ನು ತೆಗೆದುಹಾಕಲಾಗಿದೆ. ದೇಶದ ಅಗ್ರಗಣ್ಯ ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರು ಮತ್ತು ಗಡಿನಾಡ ಕನ್ನಡ ಹೋರಾಟಗಾರ, ಏಕೀಕರಣದ ನೇತಾರ, ಸ್ವಾತಂತ್ರ್ಯ ಸಮರದಲ್ಲೂ ಭಾಗಿಗಳಾಗಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರನ್ನು ಕೈಬಿಡಲಾಗಿದೆ. ಆದರೆ ಇದರ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿ ಹರಡಿದ್ದರಿಂದ ಅನೇಕ ಹೆಸರುಗಳನ್ನು ಮತ್ತೆ ಸೇರಿಸಲಾಯಿತು. ಆದರೆ ನಾರಾಯಣ ಗುರು ಹಾಗೂ ಕಯ್ಯಾರ ಕಿಞ್ಞಣ್ಣ ರೈಗಳ ಹೆಸರನ್ನು ಇನ್ನೂ ಸೇರಿಸದಿರುವುದು ಖಂಡನೀಯ. ಪಠ್ಯಕ್ರಮ ಪರಿಷ್ಕರಣೆ ಹೆಸರಿನಲ್ಲಿ ಕೆಲವು ವಿಭಾಗಗಳ ವಿರುದ್ಧ ತಾರತಮ್ಯವನ್ನು ನಿಲ್ಲಿಸಬೇಕು ಮತ್ತು ಪಠ್ಯಪುಸ್ತಕಗಳಲ್ಲಿ ಅವರ ಹೆಸರನ್ನು ಸೇರಿಸಬೇಕು ಎಂದು ಮಂಡಲ ಕಾಂಗ್ರೆಸ್ಸ್ ಒತ್ತಾಯಿಸಿದೆ.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್, ಸದಸ್ಯ ಮಂಜುನಾಥ ಆಳ್ವ ಮಡ್ವ, ಮುಖಂಡರಾದ ಲೋಕನಾಥ ಶೆಟ್ಟಿ, ಮೋಹನ ರೈ, ಪೃಥ್ವಿರಾಜ್ ಶೆಟ್ಟಿ, ರವಿ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

.jpg)
