HEALTH TIPS

ಸುದ್ದಿಮಾಧ್ಯಮಗಳೋ? ದ್ವೇಷ ಸಾಧನಗಳೋ?

             ತಾವು ಬರೆದದ್ದನ್ನೆಲ್ಲಾ ಜನ ಓದುತ್ತಾರೆ ಮತ್ತು ಹೇಳಿದ್ದನ್ನೆಲ್ಲಾ ನಂಬುತ್ತಾರೆ ಎಂದು ಬೀಗುತ್ತಿದ್ದ ಮಾಧ್ಯಮಗಳಿಗೆ ಮೊನ್ನೆ ಬಿಡುಗಡೆಯಾದ ರಾಯ್ಟರ್ಸ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಡಿಜಿಟಲ್ ನ್ಯೂಸ್ ರಿಪೋರ್ಟ್ -2022 ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.

          ಅದು ಜನರು ತಮಗೆ ಸಿಗುತ್ತಿರುವ ಸುದ್ದಿಗಳ ಬಗ್ಗೆ ಯಾವ ಧೋರಣೆ ಹೊಂದಿದ್ದಾರೆ ಮತ್ತು ಸುದ್ದಿಯನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬ ಬಗ್ಗೆ ಕೆಲವು ಕಣ್ಣು ತೆರೆಸುವ ಅಂಶಗಳನ್ನು ಮುಂದಿಟ್ಟಿದೆ.

              ಆ ವರದಿಯ ಪ್ರಕಾರ ಜಗತ್ತಿನಾದ್ಯಂತ ಜನರು ಅದರಲ್ಲೂ ಯುವಜನರು ಸುದ್ದಿಯ ಬಗ್ಗೆ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಅವುಗಳಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಅವರ ಅಧ್ಯಯನದಲ್ಲಿ ಜನರು ನೀಡಿರುವ ಕಾರಣಗಳೆಂದರೆ- ಸುದ್ದಿಗಳು ನಿಜವಾಗಿರುವುದಿಲ್ಲ, ಒಂದು ರಾಜಕೀಯ ಅಥವಾ ಪಕ್ಷದ ಪರವಾಗಿರುತ್ತವೆ ಮತ್ತು ದೊಡ್ದ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಇಂತಹ ಮಾಧ್ಯಮಗಳ ಮಾಲಕರಾಗಿರುತ್ತಾರೆ ಎಂಬುದು. ಈ ಸಂಸ್ಥೆಯು ಸಂದರ್ಶಿಸಿದವರಲ್ಲಿ ಒಟ್ಟು ಶೇ. 42 ಜನರು ಮಾತ್ರ ಸುದ್ದಿಯನ್ನು ನಂಬುತ್ತೇವೆ ಎಂದು ಹೇಳಿದ್ದಾರೆ. ಫ್ರಾನ್ಸ್ ಮತ್ತು ಇತರ ಕೆಲವು ದೇಶಗಳಲ್ಲಿ ಉಳ್ಳವರಲ್ಲಿ ಸುದ್ದಿಯನ್ನು ನಂಬುವವರು ಜಾಸ್ತಿಯಿದ್ದರೆ ಬಡವರು ಸುದ್ದಿ ಮಾಧ್ಯಮಗಳು ಒದಗಿಸುವ ಸುದ್ದಿ ಮತ್ತು ದೃಷ್ಟಿಕೋನಗಳ ಬಗ್ಗೆ ಸಿನಿಕ ತಿರಸ್ಕಾರವನ್ನು ತೋರಿದ್ದಾರೆ.

                ಇದರ ಜೊತೆಗೆ ಆ ಅಧ್ಯಯನವು ಸುದ್ದಿ ಉದ್ಯಮದ ಭವಿಷ್ಯದ ಬಗ್ಗೆಯೂ ಕೆಲವು ಸೂಚನೆಗಳನ್ನು ಕೊಟ್ಟಿದೆ. ಈಗಲೂ ಸುದ್ದಿಯನ್ನು 'ಓದುವವರು' ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಸಾಮಾಜಿಕ ಜಾಲತಾಣಗಳ ಜೊತೆಗೆ ಬೆಳೆದ ತಲೆಮಾರಿನಲ್ಲಿ ಸುದ್ದಿಯನ್ನು 'ನೋಡುವವರು' ಜಾಸ್ತಿ. ಭಾರತದಲ್ಲಿ ಈಗಲೂ ಶೇ. 58ರಷ್ಟು ಜನ ಸುದ್ದಿಯನ್ನು 'ಓದುತ್ತಾರೆ', ಆದರೆ ಸುದ್ದಿಯನ್ನು 'ನೋಡುವ' ಯುವಸಮೂಹ ಹೆಚ್ಚಾಗುತ್ತಿದೆ. ಬಹುಪಾಲು ಸುದ್ದಿ ಓದುವ ಮತ್ತು ನೋಡುವ ಗ್ರಾಹಕರು ಅದನ್ನು ಪ್ರಧಾನವಾಗಿ ಫೇಸ್‌ಬುಕ್ ಮತ್ತು ಇನ್ನಿತರ ಮೂಲಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಫೇಸ್‌ಬುಕ್ ಈಗ ಯುವಜನಾಂಗದ ಹಾಗೂ ಜಗತ್ತಿನ ಭವಿಷ್ಯವನ್ನು ರೂಪಿಸುವುದರಲ್ಲಿ ದೈತ್ಯ ಪ್ರಭಾವ ಪಡೆದುಕೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಏಕೆಂದರೆ ಫೇಸ್‌ಬುಕ್‌ನ ಅಲ್ಗಾರಿದಂ ಮತ್ತು ಅದನ್ನು ನಿರ್ವಹಿಸುವ ಸಿಬ್ಬಂದಿ ಬಲಪಂಥೀಯ ಒಲವುಳ್ಳವರಾಗಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಭಾರತದಲ್ಲಂತೂ ಅಂಬಾನಿಗಳು ಬಿಜೆಪಿಗೆ ಪೂರಕವಾಗಿ ಫೇಸ್‌ಬುಕ್ ಅನ್ನು ದುಡಿಸಿಕೊಳ್ಳಲೆಂದೇ NEWJ ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವುದು ಈಗ ಬಯಲಾಗಿದೆ. ಇದಲ್ಲದೆ ಬಲಪಂಥೀಯರು ಹಾಕುವ ಕೋಮು ಪ್ರಚೋದಕ ಕಂಟೆಂಟ್‌ಗಳ ಬಗ್ಗೆ ದೂರುಗಳನ್ನು ನೀಡಿದರೂ ಫೇಸ್‌ಬುಕ್ ಆಡಳಿತದ ಮೌನ ನಿರ್ಲಕ್ಷ್ಯ. ಬದಲಿಗೆ ಬಲಪಂಥೀಯ ರಾಜಕೀಯವನ್ನು ಟೀಕಿಸುವ ಅಥವಾ ಪರ್ಯಾಯ ರಾಜಕೀಯ ಪ್ರತಿಪಾದಿಸುವ ಪೋಸ್ಟುಗಳನ್ನು 'ಕಮ್ಯುನಿಟಿ ನಿಬಂಧನೆಗಳ' ಹೆಸರಿನಲ್ಲಿ ವಾರಗಟ್ಟಲೆ ಅಮಾನತ್ತಿನಲ್ಲಿಡಲಾಗುತ್ತದೆ. ಹೀಗಾಗಿ ಈ ಫೇಸ್‌ಬುಕ್‌ನಂತಹ ಜಾಲತಾಣವು ಬಲಪಂಥೀಯ ರಾಜಕಾರಣದ ಪ್ರಬಲ ಸಾಧನವಾಗಿಬಿಡುತ್ತಿದೆ ಎಂಬುದು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ.

                ಇದರ ಸಾಮಾಜಿಕ ಪರಿಣಾಮ ತುಂಬಾ ಭೀಕರವಾಗಿರುತ್ತದೆ. ಉದಾಹರಣೆಗೆ ಭಾರತದ ದೃಶ್ಯ ಮಾಧ್ಯಮಗಳೆಲ್ಲವೂ ಈಗ ಸಾಮಾಜಿಕ ಜಾಲತಾಣಗಳನ್ನು ವಿಸ್ತೃತವಾಗಿ ಬಳಸುತ್ತವೆ. ಅವುಗಳಲ್ಲಿ ಬಹುಪಾಲು ದಲಿತರ ಬಗ್ಗೆ ತಿರಸ್ಕಾರ ಹಾಗೂ ಮುಸ್ಲಿಮರ ಬಗ್ಗೆ ದ್ವೇಷ ಇರುವ ರಾಜಕೀಯವನ್ನೇ ರೋಚಕವಾಗಿ ಬಿತ್ತರಿಸುತ್ತಾ ಬಂದಿರುವ ಸುದ್ದಿವಾಹಿನಿಗಳೇ. ಇಂತಹ ಸುದ್ದಿವಾಹಿನಿಗಳು ಮತ್ತು ಅದರ ಕಂಟೆಂಟ್ ಬಗ್ಗೆ ಉದಾರವಾಗಿರುವ ಜಾಲತಾಣಗಳ ನಿರ್ವಹಣೆಗಳಿಂದಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಬಿಜೆಪಿಯೇತರ ರಾಜಕೀಯದವರು ಸದಾ ಜನರೆದುರು ವಿಲನ್‌ಗಳೆಂದು ಚಿತ್ರಿಸಲ್ಪಡುತ್ತಾ ನಿರಂತರವಾಗಿ ರಾಜಕೀಯ ಹಾಗೂ ದೈಹಿಕ ದಾಳಿಗೆ ಗುರಿಯಾಗುತ್ತಿದ್ದಾರೆ.

ಆದರೆ ಕತ್ತಲಲ್ಲೂ ಕೋಲ್ಮಿಂಚು ಕಂಡಂತೆ ಇದೇ ಜೂನ್ 13ರಂದು ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಆಯಂಡ್ ಡಿಜಿಟಲ್ ಸ್ಟ್ಯಾಂಡರ್ಡ್ ಅಥಾರಿಟಿ (ಎನ್‌ಬಿಡಿಎಸ್‌ಎ) ಇಂತಹ ಕೆಲವು ಸುದ್ದಿಗಳನ್ನು ಬಿತ್ತರಿಸಿದ ಸುದ್ದಿ ವಾಹಿನಿಗಳ ಬಗ್ಗೆ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಮುಖ್ಯವಾಗಿ-ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ರ ಮೇಲೆ ಪೊಲೀಸರು ಹೊರಿಸಿರುವ ಆಪಾದನೆಗಳನ್ನು ಕೋರ್ಟಿನ ತೀರ್ಪೆಂಬಂತೆ ಬಿತ್ತರಿಸಿದ್ದನ್ನು, ಮುಸ್ಲಿಮರು ಧಾರ್ಮಿಕ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆಂದು ಅರ್ಥ ಬರುವ ಶೀರ್ಷಿಕೆಗಳನ್ನು ಕೊಟ್ಟಿದ್ದೂ, ರೈತರ ಐತಿಹಾಸಿಕ ಹೋರಾಟ ನಡೆಯುವಾಗ ರಾಕೇಶ್ ಟಿಕಾಯತ್ ಅವರ ಹೇಳಿಕೆಯನ್ನು ತಪ್ಪಾರ್ಥ ಬರುವಂತೆ ಅರ್ಧ ಮಾತ್ರ ಪ್ರಕಟಿಸಿದ್ದನ್ನು ಹಾಗೂ ಮುಸ್ಲಿಮರು ತಮ್ಮ ಸರಕನ್ನು ಉಗುಳಿ ಮಾರುತ್ತಾ 'ಉಗುಳು ಜಿಹಾದ್' ನಡೆಸುತ್ತಾರೆ ಎಂಬರ್ಥ ಬರುವ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಒಂದೇ ಸಮುದಾಯವನ್ನು ಗುರಿಮಾಡಿದ್ದು-ಇವೆಲ್ಲವೂ ಸುದ್ದಿಯ ನೈತಿಕತೆಗೆ ಮತ್ತು ಗುಣಮಟ್ಟಕ್ಕೆ ವಿರುದ್ಧವಾದದ್ದೆಂದು ಮತ್ತು ಅದರ ಟೇಪನ್ನು ತಮ್ಮ ವಾಹಿನಿಗಳಿಂದ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಅಳಿಸಿಹಾಕಬೇಕೆಂದೂ ಜೀ ನ್ಯೂಸ್, ಜೀ ಹಿಂದೂಸ್ಥಾನ್, ಇಂಡಿಯಾ ಟಿವಿ, ಆಜ್‌ತಕ್ ಟಿವಿಗಳಿಗೆ ತಾಕೀತು ಮಾಡಿದೆ.

              ಇವೆಲ್ಲವೂ ಸ್ವಾಗತಾರ್ಹ ಕ್ರಮಗಳೇ. ಆದರೆ ಈ ಕ್ರಮಗಳು ಮತ್ತೆ ಇಂತಹ ತಪ್ಪುಮಾಡದಂತೆ ಎಚ್ಚರಿಸುವಷ್ಟು ಕಠಿಣ ಕ್ರಮಗಳೇ? ಏಕೆಂದರೆ ಈ ಕ್ರಮಗಳನ್ನು ಘೋಷಿಸಿದ ನಂತರವೂ ಅದೇ ಟಿವಿಗಳೇ ಮೊನ್ನೆ ಕಾನ್ಪುರದಲ್ಲಿ ಮಾನವ ಹಕ್ಕು ಹೋರಾಟಗಾರ್ತಿಯೊಬ್ಬರ ಮನೆಯನ್ನು ಧ್ವಂಸ ಮಾಡಿದ್ದನ್ನು ಯೋಗಿ ಸರಕಾರದ ದೇಶಪ್ರೇಮಿ ಕ್ರಮವೆಂಬಂತೆ ಬಿತ್ತರಿಸಿದವು ಹಾಗೂ ಯಾವುದೇ ಪುರಾವೆ ಇಲ್ಲದಿದ್ದರೂ ದಿನಪೂರ್ತಿ ಸಂತ್ರಸ್ತರನ್ನೇ ಸಂಚುಕೋರರೆಂಬಂತೆ ಕಥೆಗಳನ್ನು ಕಟ್ಟಿ ಬಿತ್ತರಿಸಿದವು. ಸುದ್ದಿಮಾಧ್ಯಮಗಳ ಮುಖವಾಡ ತೊಟ್ಟಿರುವ ಇಂತಹ ದ್ವೇಷರಾಜಕಾರಣದ ಸಾಧನಗಳನ್ನು ಪರ್ಯಾಯ ರಾಜಕಾರಣದಿಂದಲೇ ಎದುರಿಸಬೇಕಾಗುತ್ತದೆ ಮತ್ತು ಅದಕ್ಕಾಗಿಯೇ ಜನರಿಂದ, ಜನರಿಗಾಗಿ ರೂಪಿಸಿದ ಪರ್ಯಾಯ ಮಾಧ್ಯಮ ಗಟ್ಟಿಗೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries