ನವದೆಹಲಿ: ದೇಶದಲ್ಲಿ ‘ಅತ್ಯಾಚಾರ ಸಂಸ್ಕೃತಿ’ಯನ್ನು ಉತ್ತೇಜಿಸುವುದಕ್ಕಾಗಿ ಭಾರಿ ವಿವಾದವನ್ನು ಹುಟ್ಟುಹಾಕಿದ ಬಾಡಿ ಸ್ಪ್ರೇ ಬ್ರ್ಯಾಂಡ್‌ನ ಎರಡು ವಿವಾದಾತ್ಮಕ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಸೂಚಿಸಿದೆ.
ಹೊಸ ಬಾಡಿ ಸ್ಪ್ರೇ 'ಶಾಟ್' ಗಾಗಿ ಸುಗಂಧ ದ್ರವ್ಯ ಬ್ರಾಂಡ್ ಲೇಯರ್‌ನಿಂದ ವಿವಾದಾತ್ಮಕ ಡಿಯೋಡ್ರೆಂಟ್ ಜಾಹೀರಾತುಗಳನ್ನು ಅಮಾನತುಗೊಳಿಸುವಂತೆ ಈ ಆದೇಶವಿದೆ.
ಜಾಹಿರಾತು ನಿಯಮ ಪ್ರಕಾರ ತನಿಖೆ ನಡೆಸಲಾಗುತ್ತದೆ ಎಂದು ಕೂಡ ಸಚಿವಾಲಯ ಹೇಳಿದೆ.
'ಅತ್ಯಾಚಾರ ಸಂಸ್ಕೃತಿ'ಯನ್ನು ಉತ್ತೇಜಿಸುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಟೀಕಿಸಿದ್ದರು. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಜಾಹೀರಾತುಗಳನ್ನು ಮೊದಲು ಪ್ರಸಾರ ಮಾಡಲಾಯಿತು.
ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದರು.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸ್ವಾತಿ ಮಲಿವಾಲ್ ಮಾತನಾಡಿ, ಡಿಯೋಡ್ರೆಂಟ್ ಜಾಹೀರಾತು ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮನಸ್ಥಿತಿಗೆ ಉತ್ತೇಜಿಸುತ್ತದೆ. ಜಾಹೀರಾತು ನೀಡಿದ ಮತ್ತು ತಯಾರು ಮಾಡಿದ ಕಂಪೆನಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ತಕ್ಷಣವೇ ಎಲ್ಲಾ ಕಡೆಗಳಿಂದ ಜಾಹೀರಾತನ್ನು ತೆಗೆದುಹಾಕಬೇಕು ಎಂದು ನಾವು ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಜಾಹೀರಾತು ಪ್ರಸಾರವಾದ ನಂತರ ಹಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು.




