ಮುಂಬೈ: ರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಸರ್ಕಾರವೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಶಿವಸೇನಾ ಹೇಳಿದೆ.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಎರಡು-ಮೂರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಮತ್ತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಹೆಸರುಗಳು ಬಿಜೆಪಿ ಅಂಗಳದಲ್ಲಿ ಚರ್ಚೆಯಲ್ಲಿವೆ ಎನ್ನಲಾಗಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಂಬೈನಲ್ಲಿ ಜೂನ್ 20 ಅಥವಾ 21 ರಂದು ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪವಾರ್ ನಿರಾಕರಿಸಿದ್ದರು.
ಕೋವಿಂದ್ ಅವರ ಅಧಿಕಾರವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಅಭ್ಯರ್ಥಿ ನಾಮಪತ್ರ ಸಲ್ಲಿಕೆಯು ಬುಧವಾರ ಆರಂಭಗೊಳ್ಳಲಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಪ್ರಕ್ರಿಯೆ ಜುಲೈ 21ರಂದು ನಡೆಯಲಿದೆ.
ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ ಮತ್ತು ಸಮಾಜವಾದಿ ಪಾರ್ಟಿ ಸೇರಿದಂತೆ 17 ಪಕ್ಷಗಳು ಪಾಲ್ಗೊಂಡಿದ್ದವು.





